15 ದಿನದೊಳಗೆ ₹10 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳ ಪುಸ್ತಕ ಬಿಡುಗಡೆ: ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Oct 11, 2026, 03:15 AM IST
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಇತರರು ದಸರಾ ಆಚರಣೆಯ ಪೋಸ್ಟರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 13 ವರ್ಷಗಳಲ್ಲಿ ಕೈಗೊಂಡಿರುವ ₹10 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರ ಒಳಗೊಂಡ ಪುಸ್ತಕವನ್ನು 15 ದಿನದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 13 ವರ್ಷಗಳಲ್ಲಿ ಕೈಗೊಂಡಿರುವ ₹10 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರ ಒಳಗೊಂಡ ಪುಸ್ತಕವನ್ನು 15 ದಿನದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ದಸರಾ ಆಚರಣೆಯ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲವರು ಈ ರೀತಿಯ ರಾಜಕೀಯ ಮಾಡುತ್ತಿದ್ದಾರೆ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂಬುದಕ್ಕೆ ದಾಖಲೆ ಸಹಿತ ಉತ್ತರ ನೀಡಲು ನಿರ್ಧರಿಸಿದ್ದೇವೆ. ವಿವಿಧ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರವನ್ನು ಪುಸ್ತಕದಲ್ಲಿ ನೀಡಲಾಗುವುದು ಎಂದರು.

ವಿಂಡ್‌ ಪವರ್- ರಸ್ತೆ ಹಾಳು: ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದರೂ, ವಿಂಡ್‌ ಪವರ್‌ ಕಂಬಗಳನ್ನು ಸಾಗಿಸುವ ಬೃಹತ್ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. 15ರಿಂದ 20 ಟನ್‌ ಭಾರ ತಡೆದುಕೊಳ್ಳುವ ಸಾಮರ್ಥ್ಯವಿರುವ ರಸ್ತೆಗಳಲ್ಲಿ 50ರಿಂದ 60 ಟನ್‌ ಭಾರದ ವಾಹನಗಳು ಸಂಚರಿಸುತ್ತಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸ್ಥಳೀಯವಾಗಿ ವಾಹನಗಳ ಸಂಚಾರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಈಗಾಗಲೇ ಸರ್ಕಾರಕ್ಕೆ ದೂರು ನೀಡಿದ್ದು, ಹಾಳಾದ ರಸ್ತೆಗಳನ್ನು ಸಂಬಂಧಿಸಿದ ವಿಂಡ್‌ ಪವರ್‌ ಕಂಪನಿಗಳೇ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.

ರಸ್ತೆ ಅಭಿವೃದ್ಧಿಗೆ ₹150 ಕೋಟಿ: ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹100 ಕೋಟಿ ಹಾಗೂ ನಗರ ಪ್ರದೇಶದ ರಸ್ತೆ ಅಭಿವೃದ್ಧಿಗೆ ₹50 ಕೋಟಿ ಸೇರಿದಂತೆ ಒಟ್ಟು ₹150 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನದ ಭರವಸೆ ನೀಡಿದ್ದಾರೆ ಎಂದರು.

4 ದಿನಗಳಲ್ಲಿ ವಿಡಿಯೊ ಬಿಡುಗಡೆ: ಹ್ಯಾಟಿ-ಮುಂಡರಗಿ ಗ್ರಾಮದಲ್ಲಿ ನಡೆದ ಗಲಾಟೆಯನ್ನು ಯಾರು ಮಾಡಿಸಿದರು, ಹಣ ನೀಡಿ ಯಾರು ಪ್ರಚೋದಿಸಿದರು ಎಂಬುದಕ್ಕೆ ಸಂಬಂಧಿಸಿದ ವಿಡಿಯೊ ಸೇರಿದಂತೆ ದಾಖಲೆಗಳು ನನ್ನ ಬಳಿ ಇವೆ. ನಾಲ್ಕು ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ರಾಘವೇಂದ್ರ ಹಿಟ್ನಾಳ ಹೇಳಿದರು.

ಬಿಜೆಪಿಯ ಡಾ. ಬಸವರಾಜ ಕ್ಯಾವಟರ್ ಹಾಗೂ ಜೆಡಿಎಸ್‌ನ ಸಿ.ವಿ. ಚಂದ್ರಶೇಖರ ಅವರು ಈ ಘಟನೆಯ ಹಿಂದೆ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕ್ಷುಲ್ಲಕ ರಾಜಕೀಯದ ಮೂಲಕ ನನ್ನನ್ನು ಕುಗ್ಗಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ. ಆದರೆ, ಇಂತಹ ಪ್ರಯತ್ನಗಳಿಂದ ನಾನು ಕುಗ್ಗುವುದಿಲ್ಲ. ಈ ತಂತ್ರಗಳು ಫಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕುಟುಂಬ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಅವರ ಕುಟುಂಬ ಸುಮಾರು 25 ವರ್ಷಗಳಿಂದ ರಾಜಕೀಯವಾಗಿ ಸ್ಪರ್ಧೆ ಮಾಡುತ್ತಿದ್ದರೂ, ಈ ರೀತಿಯ ಕ್ಷುಲ್ಲಕ ರಾಜಕೀಯ ಮಾಡಿಲ್ಲ. ಪ್ರತಿ ಹಳ್ಳಿಯಲ್ಲಿಯೂ ನಮ್ಮ ಕಾರ್ಯಕರ್ತರು, ನಾಯಕರು ಇದ್ದಾರೆ. ಸಂಗಣ್ಣ ಕರಡಿ ಅವರಿಗೂ ಕಾರ್ಯಕರ್ತರಿದ್ದಾರೆ. ಆದರೆ, ಹ್ಯಾಟಿ-ಮುಂಡರಗಿಯಲ್ಲಿ ಎತ್ತಿನ ಬಂಡಿ ಅಡ್ಡ ನಿಲ್ಲಿಸಲಾಗಿದೆ. ಪ್ರತಿಭಟನೆ ಮಾಡುವವರು ಹೀಗೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಅಟ್ರಾಸಿಟಿಗೂ ನನಗೂ ಸಂಬಂಧವಿಲ್ಲ: ಹ್ಯಾಟಿ-ಮುಂಡರಗಿ ಗಲಾಟೆ ಪ್ರಕರಣದಲ್ಲಿ ಅಟ್ರಾಸಿಟಿ ಕೇಸ್‌ ದಾಖಲಿಸಲು ನಾನು ಹೇಳಿಲ್ಲ. ಗಾಯಗೊಂಡ ಬಸಣ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ವೈದ್ಯಕೀಯ-ಕಾನೂನು ಪ್ರಕರಣದ (ಎಂಎಲ್‌ಸಿ) ಆಧಾರದ ಮೇಲೆ ದೂರು ನೀಡಿದ್ದಾರೆ. ಅಟ್ರಾಸಿಟಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆ ನಡೆದಾಗ ನಾನು ಕಾರಿನೊಳಗೆ ಇದ್ದೆ. ಹೊರಗೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಪೊಲೀಸ್ ಅಧಿಕಾರಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ಬಿಜೆಪಿ ಖಾಲಿ ಮನೆಯಾಗಿದೆ. ಅಲ್ಲಿಗೆ ನಾನು ಯಾಕೆ ಹೋಗಲಿ, ಇದೆಲ್ಲ ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬರ ನಿವಾರಣೆಗೆ ಪ್ರಾರ್ಥನೆ: ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಅ. 17 ಮತ್ತು 18ರಂದು ದಸರಾ ಆಚರಣೆ ಹಮ್ಮಿಕೊಳ್ಳಲಾಗಿದೆ. ಬರ ನಿವಾರಣೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಗುವುದು. ಮಹಿಷಾಸುರ ಮರ್ಧಿನಿ ರೂಪಕ, ರಾಮಾಯಣದ ಹಿನ್ನೆಲೆಯ ರೂಪಕ, ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ನಾಗರಳ್ಳಿ, ಶ್ರೀನಿವಾಸ ಗುಪ್ತಾ, ರಮೇಶ ಹ್ಯಾಟಿ, ಮಹೇಂದ್ರ ಛೋಪ್ರಾ, ಗಾಳೆಪ್ಪ ಪೂಜಾರ, ಸುರೇಶ ದಾಸರಡ್ಡಿ ಇದ್ದರು.

ಗುತ್ತಿಗೆ ನೀಡಿಲ್ಲ: ಹಿಂದೂ ಧಾರ್ಮಿಕ ಆಚರಣೆಗಳ ಗುತ್ತಿಗೆಯನ್ನು ಬಿಜೆಪಿಯವರಿಗೆ ನೀಡಿಲ್ಲ. ಯಾರು ಬೇಕಾದರೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಈಗ ಕೊಪ್ಪಳದಲ್ಲಿಯೂ ಇಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾತ್ಕಾಲಿಕ ಮೀಸಲಾತಿ ಪ್ರಕಟಣೆ ಬೆನ್ನಲ್ಲೇ ರಾಜಕೀಯ ಕಾವು
ಮಳೆಯಿಲ್ಲದೆ ಮಂಕಾದ ಹಿಂಗಾರು: ಬೀಜ ಮಾರಾಟಕ್ಕೆ ಬರದ ಬರೆ!