ಪುಸ್ತಕ ಕಣ್ಣೀರು ಒರೆಸುವ ಕರವಸ್ತ್ರ : ಜೋಗಿ

KannadaprabhaNewsNetwork |  
Published : Aug 25, 2025, 02:00 AM IST
b p wadia | Kannada Prabha

ಸಾರಾಂಶ

ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದಿಂದ ಆಯೋಜಿಸಿದ್ದ ಸಮಾರಂಭದಲ್ಲಿ 16 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

 ಬೆಂಗಳೂರು : ಸಾವಣ್ಣ ಪ್ರಕಾಶನದಿಂದ ಭಾನುವಾರ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಕ್ಷರ ಆರಾಧನೆ-2025’ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಬರೋಬ್ಬರಿ 16 ಲೇಖಕರ 16 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ರಂಗಸ್ವಾಮಿ ಮೂಕನಹಳ್ಳಿ ಅವರ ‘ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?’, ಡಾ.ನಾ.ಸೋಮೇಶ್ವರ ಅವರ ‘ಹೃದಯಾಘಾತ ಭಯಪಡಬೇಡಿ’, ಜಗದೀಶ ಶರ್ಮಾ ಸಂಪ ಅವರ ‘ವ್ಯಾಸ ಸಂದರ್ಶನ’, ದೀಪಾ ಹಿರೇಗುತ್ತಿ ಅವರ ‘ನೋ ಎಕ್ಸ್‌ಕ್ಯೂಸ್’, ಡಾ.ವಿರೂಪಾಕ್ಷ ದೇವರಮನೆ ಅವರ ‘ಓ ಮನಸೇ ತುಸು ನಿಧಾನಿಸು’, ಬಿ.ವಿ.ಭಾರತಿ ಅವರ ‘ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು’, ಗಿರೀಶ್ ಶ್ರೀಪಾದ ಮೇವುಂಡಿ ಅವರ ‘ಓಯಸಿಸ್’, ಗುರುರಾಜ್ ಪಾಟೀಲ್ ಅವರ ‘ಪಾಲಕತ್ವದ ತತ್ವ’, ಶರತ್ ಭಟ್ ಅವರ ‘ಎಐ ಬರುತ್ತಿದೆ ದಾರಿ ಬಿಡಿ’, ಸರಸ್ವತಿ ಐತಾಳ್ ಅವರ ‘60 ರ ನಂತರ ಮರಳಿ ಅರಳಿ’ ಸೇರಿದಂತೆ 16 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ ಮಾತನಾಡಿ, ಪುಸ್ತಕಗಳು ಉತ್ತಮ ಸ್ನೇಹಿತರಾಗಿದ್ದು ಕಣ್ಣೀರು ಒರೆಸುವ ಕರವಸ್ತ್ರಗಳಾಗಿವೆ. ಪುಸ್ತಕಗಳನ್ನು ಓದುವುದರಿಂದ ಮನಸ್ಸು ನಿರಾಳವಾಗುತ್ತದೆ. ಮನಸ್ಸಿನಲ್ಲಿ ಉದ್ಭವಿಸುವ ಅನೇಕ ಪ್ರಶ್ನೆಗಳಿಗೆ ಪುಸ್ತಕಗಳಲ್ಲಿ ಉತ್ತರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಮತ್ತು ಪ್ರಕಾಶಕರ ನಡುವಿನ ಸಂಬಂಧ ಅತ್ಯಂತ ಮಹತ್ತರವಾದದ್ದು. ಉತ್ತಮ ಪುಸ್ತಕಗಳಿಗೆ ಓದುಗರು ಸಿಗುತ್ತಾರೆ. ವಿಭಿನ್ನ ವಿಷಯಗಳನ್ನು ರಸವತ್ತಾಗಿ ತಲುಪಿಸುವ ಹಂಬಲ ಲೇಖಕನಿಗಿದ್ದಾಗ ಅವರಿಂದ ಉತ್ತಮ ಕೃತಿಗಳು ಹೊರಹೊಮ್ಮುತ್ತವೆ. ಹಾಗೆಯೇ, ಪ್ರಕಾಶಕರೂ ಸಹ ಓದುಗರಿಗೆ ಪುಸ್ತಕಗಳನ್ನು ತಲುಪಿಸಬೇಕು ಎಂಬ ತುಡಿತ ಹೊಂದಿದ್ದಾಗ ಕೃತಿಗಳ ಮಾರಾಟವೂ ಹೆಚ್ಚಳವಾಗುತ್ತದೆ ಎಂದು ವ್ಯಾಖ್ಯಾನಿಸಿದರು.

ಲೇಖಕರ ಆಸ್ಥೆಗೆ ಪ್ರಕಾಶಕರ ಹಂಬಲವೂ ಸೇರಿಕೊಂಡಾಗ ಪುಸ್ತಕಗಳು ಅಧಿಕವಾಗಿ ಮಾರಾಟವಾಗುತ್ತವೆ. ಇದು ಪುಸ್ತಕ ಸಂಸ್ಕೃತಿ ಬೆಳೆಯಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸಾವಣ್ಣ ಪ್ರಕಾಶನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೇ ವೇದಿಕೆಯಲ್ಲಿ 16 ಕೃತಿಗಳನ್ನು ಬಿಡುಗಡೆ ಮಾಡುವ ಮೂಲಕ ಪುಸ್ತಕ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕಾಶಕ ಜಮೀಲ್ ಸಾವಣ್ಣ, ಕೃತಿಗಳ ಲೇಖಕರು ಹಾಜರಿದ್ದರು.

PREV
Read more Articles on

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ