ಕೇಂದ್ರದ ಅನ್ಯಾಯ ಬಗ್ಗೆ ಜೆಡಿಎಸ್‌, ಬಿಜೆಪಿ ಸಂಸದರಿಂದ ಮೌನ : ಸಿಎಂ

| N/A | Published : Nov 15 2025, 12:16 PM IST

CM Siddaramaiah

ಸಾರಾಂಶ

  ಪ್ರಹ್ಲಾದ್‌ ಜೋಷಿ ಸೇರಿ ಬಿಜೆಪಿ-ಜೆಡಿಎಸ್‌ ಸಂಸದರು ನೀರಾವರಿ, ಹಣಕಾಸು ವಿಚಾರಗಳೂ ಸೇರಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಯಾವ ಅನ್ಯಾಯಗಳ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಒಂದು ದಿನವೂ ಸಂಸತ್‌ನಲ್ಲಿ ರಾಜ್ಯದ ಪರವಾಗಿ ದನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ 

 ಬೆಂಗಳೂರು :  ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಸೇರಿ ಬಿಜೆಪಿ-ಜೆಡಿಎಸ್‌ ಸಂಸದರು ನೀರಾವರಿ, ಹಣಕಾಸು ವಿಚಾರಗಳೂ ಸೇರಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಯಾವ ಅನ್ಯಾಯಗಳ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಒಂದು ದಿನವೂ ಸಂಸತ್‌ನಲ್ಲಿ ರಾಜ್ಯದ ಪರವಾಗಿ ದನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಚಸಿರುವ ‘ನೀರಿನ ಹೆಜ್ಜೆ: ವಿವಾದ-ಒಪ್ಪಂದ-ತೀರ್ಪು’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ತೀರ್ಪು ಬಂದು 10 ವರ್ಷಗಳು ಕಳೆದರೂ ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ಕೇಂದ್ರ ಸರ್ಕಾರ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ಕರ್ನಾಟಕದಿಂದ ಪ್ರತಿ ವರ್ಷ ಕೇಂದ್ರಕ್ಕೆ 4.5 ಲಕ್ಷ ಕೋಟಿ ರು. ತೆರಿಗೆ ಹೋಗುತ್ತದೆ. ಆದರೆ, ಇದರಲ್ಲಿ ವಾಪಸ್‌ ಬರುವುದು ಕೇವಲ ಸುಮಾರು 60 ಸಾವಿರ ಕೋಟಿ ರು. ಅಂದರೆ 1 ರು. ತೆರಿಗೆಗೆ 14ರಿಂದ 15 ಪೈಸೆ ವಾಪಸ್‌ ಕೊಡುತ್ತಾರೆ. ಈಗ ರಾಜ್ಯದಲ್ಲಿ ರೈತರು ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಆಲಿಸಿ ಬೆಂಬಲ ಬೆಲೆ ಹೆಚ್ಚಿಸಬೇಕಿರುವುದು ಕೇಂದ್ರ ಸರ್ಕಾರ. ಆದರೆ, ಅದನ್ನೂ ಮಾಡುತ್ತಿಲ್ಲ. ಸಕ್ಕರೆಗೆ 31 ರು. ಬೆಲೆ ನಿಗದಿ ಮಾಡಿ 10 ವರ್ಷ ಕಳೆದಿದೆ. ಕೈಗಾರಿಕೆಗಳು ಅದನ್ನು ಹೆಚ್ಚಿಸಲು ಕೇಳುತ್ತಿದ್ದಾರೆ. ಆದರೂ ಕೇಂದ್ರದವರು ಮಾತನಾಡುತ್ತಿಲ್ಲ. ಈ ರೀತಿ ರಾಜ್ಯಕ್ಕೆ ಸಾಲು ಸಾಲು ಅನ್ಯಾಯವಾಗುತ್ತಿದ್ದರೂ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್‌ ಸಂಸದರು ಸಂಸತ್‌ನಲ್ಲಿ ಒಂದು ದಿನವೂ ರಾಜ್ಯದ ನೀರಾವರಿ ಯೋಜನೆಗಳ ಪರವಾಗಿಯಾಗಲಿ, ಆರ್ಥಿಕ ಅನ್ಯಾಯ ಖಂಡಿಸುವುದಾಗಲಿ, ರಾಜ್ಯದ ರೈತರ ಪರವಾಗಿ ದನಿ ಎತ್ತು ಕೆಲಸವಾಗಲಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟಿಗೆ ಕ್ಲಿಯರೆನ್ಸ್ ಕೊಡಿಸಲಿ:

ಮೇಕೆದಾಟು ಸಮತೋಲಿತ ಅಣೆಕಟ್ಟಿನಲ್ಲಿ 67 ಟಿಎಂಸಿ ನೀರು ಶೇಖರಿಸಬಹುದು. ಜತೆಗೆ 400 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ, ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ನೀಡುವ ಕೆಲಸ ಆಗುತ್ತದೆ. ಹೆಚ್ಚು ಮಳೆಯಾದಾಗ ಸಮುದ್ರ ಸೇರುವ ನೀರನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ. ಮಳೆ ಕೊರತೆಯಾದ ಸಮಯದಲ್ಲಿ ಈ ಅಣೆಕಟ್ಟೆಯ ನೀರನ್ನು ತಮಿಳುನಾಡಿಗೆ ಹರಿಸಬಹುದು. ಇದರಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ ಆಗುತ್ತದೆ. ಅದರೂ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಯೋಜನೆ ವಿರುದ್ಧ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಕೇಂದ್ರ ಅರಣ್ಯ ಇಲಾಖೆಯಿಂದ ಯೋಜನೆಗೆ ಅನುಮತಿ ಪತ್ರ ಕೊಡಿಸುವ ಕೆಲಸವನ್ನು ಬಿಜೆಪಿ ಸಂಸದರು ಮಾಡಲಿ ಎಂದರು.

ಕೃಷ್ಣ ಮೇಲ್ದಂಡೆ ಯೋಜನೆಗೆ 1.33 ಲಕ್ಷ ಸಾವಿರ ಎಕರೆ ಮುಳುಗಡೆ ಅಗಲಿದೆ. ಮುಳುಗಡೆಯಾಗುವ ನೀರಾವರಿ ಜಮೀನಿಗೆ ಎಕರೆಗೆ 40 ಲಕ್ಷ, ಖುಷ್ಕಿ ಜಮೀನಿಗೆ 30 ಲಕ್ಷ ನೀಡಲು ನಿರ್ಧಾರ ಮಾಡಿದ್ದೇವೆ. ಇದರಿಂದ 70 ಸಾವಿರ ಕೋಟಿ ರು. ವೆಚ್ಚವಾಗಲಿದೆ. ರೈತರು, ರಾಜ್ಯದ ಹಿತದೃಷ್ಟಿಯಿಂದ ಇದನ್ನು ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ಕೃಷ್ಣೆಯಿಂದ ನಮಗೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಕೇಂದ್ರ ಸರ್ಕಾರ ಈ ಯೋಜನೆಗೆ ಅಧಿಸೂಚನೆ ಹೊರಡಿಸಲಿ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಚ್‌.ಕೆ.ಪಾಟೀಲ್‌, ಕೃಷ್ಣ ಬೈರೇಗೌಡ, ಬೈರತಿ ಸುರೇಶ್‌, ಶಿವರಾಜ ತಂಗಡಗಿ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮೋಹನ್‌ ಕಾತರಕಿ ಮತ್ತಿತರರಿದ್ದರು.

ಡಿಕೆಶಿ ಪುಸ್ತಕಕ್ಕೆ ಸಿದ್ದರಾಮಯ್ಯ ಮೆಚ್ಚುಗೆ 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ‘ನೀರಿನ ಹೆಜ್ಜೆ’ ಪುಸ್ತಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಆಗಲು ನೀರಾವರಿ ಸಚಿವರಾಗಿ ಡಿ.ಕೆ.ಶಿವಕುಮಾರ್‌ ಅವರ ಪ್ರಯತ್ನವಿದೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ 1 ವರ್ಷ 2 ತಿಂಗಳು, ಈಗಿನ ನಮ್ಮ ಸರ್ಕಾರದಲ್ಲಿ ಎರಡೂವರೆ ವರ್ಷದಿಂದ ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಇಲಾಖೆ ಸಚಿವರಾಗಿದ್ದಾರೆ. ಅವರು ತಮ್ಮ ಅನುಭವದ ಜೊತೆಗೆ ರಾಜ್ಯ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನದಿ ನೀರಿನ ಹಂಚಿಕೆ ವಿವಾದಗಳು, ಒಪ್ಪಂದಗಳು, ವಿವಾದಗಳಿಗೆ ಸಂಬಂಧಿಸಿ ಆಗಿರುವ ತೀರ್ಪುಗಳ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ‘ನೀರಿನ ಹೆಜ್ಜೆ’ ಪುಸ್ತಕ ರಚಿಸಿದ್ದಾರೆ. ಇದು ನೀರಾವರಿ ವಿಚಾರಗಳ ಮಾಹಿತಿ ತಿಳಿದುಕೊಳ್ಳಲು ಎಲ್ಲರಿಗೂ ಉತ್ತಮ ಆಕರವಾಗಲಿದೆ. ನಾನು ಪುಸ್ತಕವನ್ನು ಪೂರ್ತಿ ಓದಿಲ್ಲ. ಓದುತ್ತೇನೆ ಎಂದರು.

Read more Articles on