ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಕ್ಕಳು ಸಮಾಜವನ್ನು ಜಾತ್ಯತೀತ ದೃಷ್ಠಿಯಿಂದ ಕಾಣಬೇಕು. ಹಾಗಾಗಿಯೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಓದು ಆರಂಭಿಸಿದ್ದು, ಇದರಿಂದ ಮಕ್ಕಳಿಗೆ ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಅರಿಯಲು ಸಂವಿಧಾನ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಭಾರತ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೊಜಿಸಿದ್ದ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಜಿಲ್ಲೆಯ ಹರಮಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಪೋಷಕರು ಮಕ್ಕಳನ್ನು ವೈಜ್ಞಾನಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಬೆಳೆಸಬೇಕು. ಮಕ್ಕಳು ಮಾತ್ರವಲ್ಲದೆ ಪೋಷಕರು ಕೂಡ ಸಂವಿಧಾನವನ್ನು ಅರಿತುಕೊಂಡು ಮಕ್ಕಳಲ್ಲಿ ಉತ್ತಮ ಭಾವನೆ ಮೂಡಿಸಬೇಕು ಎಂದರು.ಮಕ್ಕಳು ಮುಂದಿನ ಭಾರತದ ಭವಿಷ್ಯಗಳು. ಹಾಗಾಗಿ ನೀವೆಲ್ಲಾ ಸಮಾಜದಲ್ಲಿನ ಜಾತಿ ಪಟ್ಟಭದ್ರ ಹಿತಾಸಕ್ತರಿಂದ ಎಚ್ಚರಿಕೆಯಾಗಿರಬೇಕು. ಇದರಿಂದ ದೂರ ಉಳಿದು ಸಮಾಜಮುಖಿಯಾಗಿ ಬೆಳೆಯಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ದ್ವೇಷಿಸಬಾರದು. ಯಾವ ಧರ್ಮವೂ ದ್ವೇಷದ ಕುರಿತು ಎಲ್ಲೂ ಹೇಳಿಲ್ಲ ಎಂದು ಕಿವಿ ಮಾತು ಹೇಳಿದರು.
ಬಡತನ ರೇಖೆಯಿಂದ ಕೆಳಗಿನವರು ಸಬಲರಾಗಬೇಕು. ಖಾಸಗಿ ಶಾಲೆಯಲ್ಲಿ ಓದುವವರ ಸರಿಸಮಾನವಾಗಿ ಸರ್ಕಾರಿ ಶಾಲೆ ಮಕ್ಕಳು ಓದಬೇಕು. ಮಕ್ಕಳಲ್ಲಿ ಬಡವ ಶ್ರೀಮಂತನೆಂದು ಯಾವುದೇ ತಾರತಮ್ಯ ಬರಬಾರದು ನಾವೆಲ್ಲ ಸಮಾನರು ಎಂಬ ಭಾವನೆ ಮೂಡಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ತಲುಪಬೇಕು. ಹಾಗಾಗಿ ಸರ್ಕಾರ ಉಚಿತ ಪುಸ್ತಕ, ಯೂನಿಫಾರ್ಮ್, ಶೂ, ಕಾಂಪಸ್ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಡಿಡಿಪಿಐ ಮಂಜುನಾಥ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರಗಳು ಮುಖ್ಯವಾಗಿದೆ. ಆದರಿಂದ ಸರ್ಕಾರವು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಹಾಲು, ಮೊಟ್ಟೆ, ತರಕಾರಿಯನ್ನು ನೀಡಲಾಗುತ್ತಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಉಂಟಾಗುವ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿದೆ. ಹಾಲಿನಲ್ಲಿ 3.4 ಗ್ರಾಂ, ಮೊಟ್ಟೆಯಲ್ಲಿ 13 ಗ್ರಾಂ ಹಾಗೂ ತರಕಾರಿಯಲ್ಲಿ 2.9 ಗ್ರಾಂ ಪ್ರೋಟಿನ್ ಇದ್ದು, ಇದನ್ನು ಸೇವಿಸುವುದರಿಂದ ಮಕ್ಕಳ ರಕ್ತಹೀನತೆ ಕಡಿಮೆಯಾಗುತ್ತದೆ. ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಲಿ ಇದು ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.ಬಿಇಒ ರಮೇಶ್, ಶಾಲೆಯ ಪ್ರಾಂಶುಪಾಲರಾದ ಗಾಯತ್ರಿ, ಹಳೆಯ ಸಂಘದ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಕಾಶಪ್ಪ, ಶಾಲೆಯ ಶಿಕ್ಷಕರುಗಳು, ಪೋಷಕರು, ಮಕ್ಕಳು, ಗ್ರಾಮಸ್ಥರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))