ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸದಂತೆ ಆಗ್ರಹಿಸಿ ಬೂಕನಕೆರೆ ಹೋಬಳಿ ನಾಗರೀಕ ಹಿತರಕ್ಷಣಾ ಸಮಿತಿ ಸದಸ್ಯರು ಬೂಕನಕೆರೆ ಬಂದ್ ಮಾಡಿ ಪ್ರತಿಭಟಿಸಿದರು.ಬಂದ್ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರ ಬೂಕನಕೆರೆಯ ಎಲ್ಲಾ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಸಮುದಾಯ ಆರೋಗ್ಯ ಕೇಂದ್ರದ ಸ್ಥಳಾಂತರ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತ ಹರ್ಷಗುಪ್ತ ಅವರ ಪ್ರತಿಕೃತಿಯನ್ನು ದಹನ ಮಾಡಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು.
ನಂತರ ಸಾರ್ವಜನಿಕರು ಬೂಕನಕೆರೆ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸುತ್ತಾ ಧರಣಿ ಸತ್ಯಾಗ್ರಹ ನಡೆಸಿದರು. ಸರ್ಕಾರದ ನಿಲುವಿನ ವಿರುದ್ಧ ಬಹಿರಂಗ ಸಭೆ ನಡೆಸಿದರು.ಈ ವೇಳೆ ಮಾತನಾಡಿದ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗಿದ್ದ ಸಮುದಾಯ ಆರೋಗ್ಯ ಕೆಂದ್ರವನ್ನು ಅಭಿವೃದ್ದಿ ಪಡಿಸುವ ಬದಲು ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಲೀನಗೊಳಿಸಲು ಹೊರಟಿರುವುದನ್ನು ಖಂಡಿಸಿದರು.
ಈ ಆರೋಗ್ಯ ಕೇಂದ್ರಕ್ಕೆ ರಾಜ್ಯ ಸರ್ಕಾರ ಸೂಕ್ತ ಫಿಜಿಷಿಯನ್ ಹಾಗೂ ಅರವಳಿಕೆ ತಜ್ಞರನ್ನು ನೇಮಕ ಮಾಡಿಲ್ಲ. ನಾನ್ ಆಪರೇಟಬಲ್ ಸರ್ಜನ್ ಎನ್ನುವ ಹುದ್ದೆಯಡಿ ಕೇವಲ ಒಬ್ಬರು ಪ್ರಸೂತಿ ತಜ್ಞರನ್ನು ನಿಯೋಜನೆ ಮಾಡಿದೆ. ಸೂಕ್ತ ಸೌಲಭ್ಯವಿಲ್ಲದ ಕಾರಣದಿಂದ ಸರ್ಕಾರ ನಿಗಧಿ ಪಡಿಸಿದ ಮಾಸಿಕ 30 ಹೆರಿಗೆಗಳು ಇಲ್ಲಿ ನಡೆಯತ್ತಿಲ್ಲ ಎಂದು ದೂರಿದರು.ಸರ್ಕಾರ ಆಸ್ಪತ್ರೆಯಲ್ಲಿ 30 ಹೆರಿಗೆಗಳು ನಡೆಯುತ್ತಿಲ್ಲ ಎಂಬ ಕಾರಣ ನೀಡಿ ತಾಲೂಕು ಕೇಂದ್ರಕ್ಕೆ ವಿಲೀನಗೊಳಿಸುತ್ತಿರುವುದು ಜನವಿರೋಧಿ ನೀತಿಯಾಗಿದೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು. ಮುಂದಿನ ಏಳು ದಿನಗಳ ಒಳಗಾಗಿ ಸರ್ಕಾರದ ವಿಲೀನ ಆದೇಶವನ್ನು ರದ್ದುಪಡಿಸದಿದ್ದರೆ ಆಸ್ಪತ್ರೆಯ ಆವರಣದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಬೂಕನಕೆರೆ ನಾಡ ಕಚೇರಿ ಉಪ ತಹಸೀಲ್ದಾರ್ ಜಗದೀಶ್ ಅವರ ಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಮನವಿ ಪತ್ರ ಅರ್ಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡ ಬೂಕನಕೆರೆ ನಾಗರಾಜು, ಬಿಜೆಪಿ ಮುಖಂಡ ಬಿ.ಜವರಾಯಿಗೌಡ, ಗ್ರಾಪಂ ಅಧ್ಯಕ್ಷ ಶ್ಯಾಂಪ್ರಸಾದ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಮಧುಸೂದನ್, ಚೋಕನಹಳ್ಳಿ ಪ್ರಕಾಶ್, ಜ್ಞಾನಸಿಂಧು ಮತ್ತಿತರರು ಭಾಗವಹಿಸಿದ್ದರು.