9 ರಂದು ಬುಕರ್ ವಿಜೇತೆ ಬಾನು ಮುಷ್ತಾಕ್ ಗೆ ಸನ್ಮಾನ

KannadaprabhaNewsNetwork |  
Published : Jun 03, 2025, 12:05 AM IST
2ಎಚ್ಎಸ್ಎನ್16 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರಿಕ ಸನ್ಮಾನ ಸಮಿತಿ ಪದಾಧಿಕಾರಿಗಳು. | Kannada Prabha

ಸಾರಾಂಶ

ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಹಾಸನದಲ್ಲಿ ಎಲ್ಲರೂ ಸೇರಿ ಸನ್ಮಾನಿಸಲಾಗುತ್ತಿದೆ. ಲಂಕೇಶ್ ಪತ್ರಿಕೆಯಲ್ಲದೇ ಸ್ಥಳೀಯ ಜನತಾ ಮಾಧ್ಯಮದಲ್ಲೂ ಕೂಡ ಅವರ ಲೇಖನ ಬರುತ್ತಿದ್ದವು. ಬೂಕರ್ ಪ್ರಶಸ್ತಿ ಸಿಕ್ಕಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.

ಕನ್ನಡಪ್ರಭ ವಾರ್ತೆ ಹಾಸನ

ಜೂನ್ 9ರ ಸೋಮವಾರದಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ನಾಗರಿಕರಿಂದ ಸನ್ಮಾನ ಹಾಗೂ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಹಾಸನ ಜಿಲ್ಲೆಯ ಹೆಮ್ಮೆಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ಕರ್ನಾಟಕ ಮತ್ತು ಇಡೀ ಭಾರತಕ್ಕೇ ಹೆಮ್ಮೆ ತರುವ ಸಂಗತಿಯಾಗಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ. ಸಮೃದ್ಧ ಹಾಗೂ ಶಾಸ್ತ್ರೀಯ ಕನ್ನಡ ಭಾಷೆ ಇಂದು ಹಲವು ಸಮಸ್ಯೆಗಳು ಮತ್ತು ದಾಳಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕನ್ನಡದ ಸತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಬಹಳ ಸಂತಸದ ವಿಷಯ ಎಂದರು. ಇದನ್ನು ಸಾಧ್ಯವಾಗಿಸಿದ ಜಿಲ್ಲೆಯ ಹಿರಿಯ ಸಾಹಿತಿ, ನ್ಯಾಯವಾದಿ ಹಾಗೂ ಜನಪರ ಚಳವಳಿಗಳ ಒಡನಾಡಿ, ಶ್ರೀಮತಿ ಬಾನು ಮುಷ್ತಾಕ್ ಮತ್ತು ಕನ್ನಡ ಕೃತಿಯನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಜಾಗತಿಕ ಮನ್ನಣೆ ಗಳಿಸಲು ಕಾರಣರಾದ ನಮ್ಮ ಪಕ್ಕದ ಜಿಲ್ಲೆಯವರಾದ ಶ್ರೀಮತಿ ದೀಪಾ ಭಾಸ್ತಿಯವರನ್ನು ಹೃದಯ ಪೂರ್ವಕವಾಗಿ ಅಭಿನಂದಿಸಬೇಕಾಗಿರುವುದು ಎಲ್ಲ ಕನ್ನಡಿಗರ ಕರ್ತವ್ಯವಾಗಿದೆ ಎಂದರು.

ಕನ್ನಡ, ಕರ್ನಾಟಕ, ಇಡೀ ದೇಶಕ್ಕೇ ಹೆಸರು ತಂದ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ನಾಗರಿಕ ಸನ್ಮಾನ ಮಾಡಿ ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ ೯ರ ಸೋಮವಾರ ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿ ಶ್ರೀಮತಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ನಾಗರಿಕ ಸನ್ಮಾನ ಮಾಡಲು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜನಪರ ಚಳವಳಿಗಳು, ಕನ್ನಡಪರ ಸಂಘಟನೆಗಳು, ಸಂಘಸಂಸ್ಥೆಗಳು ಹಾಗೂ ನಾಗರಿಕ ಸಮಿತಿ ನಿರ್ಧರಿಸಿವೆ. ಜೂನ್ ೯ರ ಸೋಮವಾರದಂದು ಕಾರ್ಯಕ್ರಮವನ್ನು ಕನ್ನಡ ನಾಡಿನ ಹಿರಿಯ ಸಾಹಿತಿ, ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಲಿದ್ದಾರೆ ಹಾಗೂ ಡಾ. ಎಚ್.ಎಸ್. ಅನುಪಮಾ ಅವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ನಗರಪಾಲಿಕೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಬಿ.ಆರ್. ಪೂರ್ಣಿಮಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಎಚ್.ಪಿ. ಮೋಹನ್ ಮಾತನಾಡಿ, ಜಿಲ್ಲೆಗೆ ಗೌರವ ತಂದಿರುವ ಬಾನು ಮುಷ್ತಾಕ್ ಅವರಿಗೆ ಸನ್ಮಾನಿಸುತ್ತಿರುವುದು ಉತ್ತಮವಾಗಿದೆ. ಜೂನ್ ೯ರ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಜನಪದ ಕಲಾತಂಡಗಳ ಮೆರವಣಿಗೆಯು ಆರಂಭವಾಗಲಿದೆ. ನಂತರ ಹಾಸನಾಂಭ ಕಲಾಕ್ಷೇತ್ರದಲ್ಲಿ ನಾಗರಿಕ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಸಾಹಿತಿಗಳು, ಎಲ್ಲಾ ಜನಪರ, ಕನ್ನಡಪರ ಸಂಘಟನೆಗಳ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಕಸಾಪ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಹಾಸನದಲ್ಲಿ ಎಲ್ಲರೂ ಸೇರಿ ಸನ್ಮಾನಿಸಲಾಗುತ್ತಿದೆ. ಲಂಕೇಶ್ ಪತ್ರಿಕೆಯಲ್ಲದೇ ಸ್ಥಳೀಯ ಜನತಾ ಮಾಧ್ಯಮದಲ್ಲೂ ಕೂಡ ಅವರ ಲೇಖನ ಬರುತ್ತಿದ್ದವು. ಬೂಕರ್ ಪ್ರಶಸ್ತಿ ಸಿಕ್ಕಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಎಲ್ಲಾ ಸಂಘ- ಸಂಸ್ಥೆಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ಇದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಕೃಷ್ಣದಾಸ್, ಸಮಾಜ ಸೇವಕ ಎಸ್.ಎಸ್. ಪಾಷಾ, ಸಂವಿಧಾನ ಓದು ಅಭಿಯಾನ ರಾಜು ಗೊರೂರು, ವಕೀಲರಾದ ಅನ್ಸಾದ್ ಪಾಳ್ಯ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಪರಮಶಿವಯ್ಯ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ