ಅರಣ್ಯದ ರಸ್ತೆ ಬಳಕೆಗೆ ಜಾರ್ಜ್‌ ಪುತ್ರಗೆ ಹೈಕೋರ್ಟ್‌ ಅನುಮತಿ

KannadaprabhaNewsNetwork |  
Published : Jun 03, 2025, 12:04 AM ISTUpdated : Jun 03, 2025, 10:12 AM IST
KJ George Son Rana george Forest Land

ಸಾರಾಂಶ

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿನ ಪ್ರವೇಶಕ್ಕೆ ತೆರಳಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಪುತ್ರ ರಾಣಾ ಅವರಿಗೆ ಕಾನೂನು ಪ್ರಕಾರ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

 ಬೆಂಗಳೂರು : ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿನ ಪ್ರವೇಶಕ್ಕೆ ತೆರಳಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಪುತ್ರ ರಾಣಾ ಅವರಿಗೆ ಕಾನೂನು ಪ್ರಕಾರ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಅರಣ್ಯದ ರಸ್ತೆ ಮಾರ್ಗ ಬಳಸಿ ಜಮೀನಿಗೆ ಹೋಗಲು ತನಗೆ ಅನುಮತಿ ನಿರಾಕರಿಸಿದ್ದ ಅರಣ್ಯ ಇಲಾಖೆ ಕ್ರಮ ಪ್ರಶ್ನಿಸಿ ರಾಣಾ ಜಾರ್ಜ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿತು. ಅಲ್ಲದೆ, ರಾಣಾ ಜಾರ್ಜ್‌ ಅವರು ಅರಣ್ಯದಲ್ಲಿನ ಯಾವುದೇ ರೀತಿಯ ಪ್ರಾಣಿ ಮತ್ತು ಸಸ್ಯಸಂಕುಲಕ್ಕೆ ಹಾನಿಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದೆ.

ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ ಬಳಸದಂತೆ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ (ಪಿಸಿಸಿಎಫ್‌) 2024ರ ಮಾರ್ಚ್‌ 1ರಂದು ಹೊರಡಿಸಿರುವ ಆದೇಶ ಅರ್ಜಿದಾರರ ವಿರುದ್ಧವಾಗಿದೆ. ಈ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತು.

ಪ್ರಕರಣದ ವಿವರ:

ಶಂಭುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿನ ಸರ್ವೆ ನಂಬರ್‌ 1, 2, 3, 26, 32 ಮತ್ತು 33ರ ಭೂಮಿಯ ಮಾಲೀಕತ್ವವನ್ನು ತಾನು ಹೊಂದಿದ್ದೇನೆ. ಆ ಆಸ್ತಿಯನ್ನು ವೈಯಕ್ತಿಕ ಬಳಕೆ ಮಾಡುತ್ತಿದ್ದೇನೆ ಹೊರತು ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಈ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಬೇಕಿದೆ. ಆದರೆ, ಅದು ಅರಣ್ಯ ಇಲಾಖೆಯ ವಶದಲ್ಲಿದೆ ಎಂದು ಅರ್ಜಿಯಲ್ಲಿ ರಾಣಾ ಜಾರ್ಜ್‌ ತಿಳಿಸಿದ್ದಾರೆ.

ಜೊತೆಗೆ, ತನ್ನ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮುಂಗಾರು ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಿದ್ದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಹೆಡಿಯಾಲ ವಲಯದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿಯು ಜಮೀನಿಗೆ ಹೋಗಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಸ್ತೆ ಬಳಲು ತಮಗೆ ನಿರ್ಬಂಧಿಸಿದ್ದಾರೆ. ಹಾಗಾಗಿ, ಅರಣ್ಯ ಸಂರಕ್ಷ ಣಾಧಿಕಾರಿ ಆದೇಶ ರದ್ದುಪಡಿಸಬೇಕು. ದಿನದ 24 ತಾಸು ತಮ್ಮ ಜಮೀನಿಗೆ ಓಡಾಡಲು ಅನುಮತಿಸಲು ಅರಣ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ರಾಣಾ ಜಾರ್ಜ್‌ ನ್ಯಾಯಾಲಯವನ್ನು ಕೋರಿದ್ದರು.

PREV
Read more Articles on

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ