ಕನ್ನಡಪ್ರಭ ವಾರ್ತೆ ಹಾಸನ
ವಿಶ್ವ ಪುಸ್ತಕ ದಿನದ ಅಂಗವಾಗಿ ನಗರದ ಹೇಮಾವತಿ ಆಸ್ಪತ್ರೆ ಎದುರಿನ ಅದಮ್ಯ ಪುಸ್ತಕ ಭಂಡಾರದಲ್ಲಿ ಅದಮ್ಯ ಬುಕ್ಸ್, ಕದಂಬ ಸೈನ್ಯ, ಕನ್ನಡ ಸಂಘಟನೆ ಹಾಗೂ ಸಾಹಿತ್ಯಾಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿಶ್ವ ಪುಸ್ತಕ ದಿನವು ಕೇವಲ ಆಚರಣೆಯಲ್ಲ, ಅದು ಭಾಷೆಯ ಹಬ್ಬ. ವಿಶ್ವಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ಅವರ ಜನನ ಮತ್ತು ಮರಣದ ದಿನವೇ ಈ ದಿನವಾಗಿರುವುದು ವಿಶೇಷ. ಹಿಂದೆ ಜಗತ್ತನ್ನಾಳುತ್ತಿದ್ದ ಗ್ರೀಕ್, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳನ್ನು ಮೀರಿಸಿ, ಇಂಗ್ಲಿಷ್ ಭಾಷೆಯನ್ನು ಪ್ರಪಂಚದ ಭಾಷೆಯನ್ನಾಗಿಸಲು ಶೇಕ್ಸ್‌ಪಿಯರ್ ನೀಡಿದ ಕೊಡುಗೆ ಅನನ್ಯ ಎಂದು ಶಿವೇಶ್ ವಿವರಿಸಿದರು.ಶೇಕ್ಸ್‌ಪಿಯರ್ ಹೇಳುವಂತೆ ಈ ಇಡೀ ಜಗತ್ತು ಒಂದು ರಂಗಭೂಮಿಯಾದರೆ, ಪುಸ್ತಕಗಳು ಆ ರಂಗಭೂಮಿಯಲ್ಲಿ ನಾವು ಹೇಗೆ ಬದುಕಬೇಕು ಎಂದು ಕಲಿಸುವ ಪಠ್ಯಗಳಿದ್ದಂತೆ. ಒಬ್ಬ ವ್ಯಕ್ತಿಯ ಆಲೋಚನೆಗಳು ಪುಸ್ತಕವಾಗಿ ಮಾರ್ಪಟ್ಟಾಗ ಅದು ಕಾಲದ ಮಿತಿಗಳನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಅವರ ಸಾಹಿತ್ಯವೇ ಸಾಕ್ಷಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಪಾದಕ ರವಿ ನಾಕಲಗೂಡು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಪುಸ್ತಕಗಳ ಮಹತ್ವ ಸಾರುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಸಂಪಾದಕ ಆನಂದ ಪಟೇಲ್ ನೆಲ್ಲಿಗೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜ್ಞಾನಾರ್ಜನೆಯ ಸೂಕ್ತಿಗಳ ಮೂಲಕ ಓದಿನ ಶಕ್ತಿಯನ್ನು ವಿವರಿಸಿದರು. ಲೇಖಕ ಗೋರೂರು ಅನಂತರಾಜು ಸಾಹಿತ್ಯವು ಸಮಾಜದ ಪ್ರತಿಬಿಂಬ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಗೋಡೆ ಬರಹಗಾರ ಗೋರೂರು ಯಾಕೂಬ್ ಅವರನ್ನು ಪುಸ್ತಕ ನೀಡಿ ಗೌರವಿಸಲಾಯಿತು. ಅವರ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸವನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.