ಪುಸ್ತಕಗಳು ಬೌದ್ಧಿಕ ಮಟ್ಟ ವೃದ್ಧಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸುತ್ತವೆ: ಡಾ.ಎಂ.ಚಂದ್ರಶೇಖರ

KannadaprabhaNewsNetwork |  
Published : Aug 13, 2026, 01:15 AM IST
38 | Kannada Prabha

ಸಾರಾಂಶ

ಓದಿನಲ್ಲಿ ಹಲವಾರು ಬಗೆಗಳಿವೆ. ಶೈಕ್ಷಣಿಕ ಓದು, ಮನರಂಜನೆಗಾಗಿ ಓದುವುದು, ವೃತ್ತಿಪರ ಓದು ಹೀಗೆ ಹಲವಾರು ಬಗೆಗಳಿದ್ದು ಸಹೃದಯರಲ್ಲಿ ಬೌದ್ಧಿಕ ಮಟ್ಟ ವೃದ್ಧಿಸುವುದರ ಜೊತೆಗೆ ಕ್ರಿಯಾಶಿಲತೆ ಬೆಳೆಸುತ್ತವೆ. ಓದಿನ ಇತಿಹಾಸವನ್ನು ನೆನೆಯುವುದಾದರೆ ಪ್ರಾಚೀನ ಕಾಲದಲ್ಲಿ ಹಸುವಿನ ಚರ್ಮದ ಮೇಲೆ, ಮರದ ತೊಗಟೆಯಲ್ಲಿ, ಜೇಡಿ ಮಣ್ಣು, ಸುಟ್ಟ ಇಟ್ಟಿಗೆಯಲ್ಲಿ ಬರೆಯುತ್ತಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತಿನ ಸಾಧಕರ ಜೀವನ ಚರಿತ್ರೆ ಓದುವುದರ ಮೂಲಕ ಜ್ಞಾನ ಅರಿಯಲು ಪುಸ್ತಕಗಳು ಸಹಕಾರಿಯಾಗಿವೆ. ಆ ಜ್ಞಾನದ ಮೂಲಕ ಸಹೃದಯರು ಬದುಕನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮೈಸೂರು ವಿವಿ ಗ್ರಂಥಾಲಯ ವಿಜ್ಞಾನ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಎಂ. ಚಂದ್ರಶೇಖರ ಅಭಿಪ್ರಾಯಪಟ್ಟರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಆಯೋಜಿಸಿದ್ದ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ಅವರ 134ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಂಥಪಾಲಕ ದಿನಾಚರಣೆ ಪ್ರಯುಕ್ತ ಓದುವ ಹವ್ಯಾಸ ರೂಢಿಸಿಕೊಳ್ಳುವ ಬಗೆ ಹೇಗೆ ಎಂಬ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಓದಿನಲ್ಲಿ ಹಲವಾರು ಬಗೆಗಳಿವೆ. ಶೈಕ್ಷಣಿಕ ಓದು, ಮನರಂಜನೆಗಾಗಿ ಓದುವುದು, ವೃತ್ತಿಪರ ಓದು ಹೀಗೆ ಹಲವಾರು ಬಗೆಗಳಿದ್ದು ಸಹೃದಯರಲ್ಲಿ ಬೌದ್ಧಿಕ ಮಟ್ಟ ವೃದ್ಧಿಸುವುದರ ಜೊತೆಗೆ ಕ್ರಿಯಾಶಿಲತೆ ಬೆಳೆಸುತ್ತವೆ. ಓದಿನ ಇತಿಹಾಸವನ್ನು ನೆನೆಯುವುದಾದರೆ ಪ್ರಾಚೀನ ಕಾಲದಲ್ಲಿ ಹಸುವಿನ ಚರ್ಮದ ಮೇಲೆ, ಮರದ ತೊಗಟೆಯಲ್ಲಿ, ಜೇಡಿ ಮಣ್ಣು, ಸುಟ್ಟ ಇಟ್ಟಿಗೆಯಲ್ಲಿ ಬರೆಯುತ್ತಿದ್ದರು. ಇಂದಿನ ಕಾಲದಲ್ಲಿ ಅಚ್ಚು ತಂತ್ರಜ್ಞಾನದ ಪ್ರಗತಿಯಿಂದ ಹಾಳೆಗಳ ಮೂಲಕ ಬರೆಯುವ ಹಾಗೂ ಓದುವ ಹವ್ಯಾಸ ಹೆಚ್ಚಾಗಿದೆ ಎಂದರು.

ಇಂತಹ ಅನುಕೂಲತೆಗಾಗಿ ಪುಸ್ತಕಗಳು ಬೇಕು. ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಿದ್ದು, ಇಲ್ಲಿ ಲಭ್ಯವಿರುವ ಪುಸ್ತಕಗಳು ಪ್ರತ್ಯೇಕವಾಗಿ ಇರುವುದರಿಂದ ಸಹೃದಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಪುಸ್ತಕಗಳು ಕಡಿಮೆ ಸಮಯದಲ್ಲಿ ಅಗಾಧವಾಗಿ ದೊರೆಯುತ್ತವೆ. ಓದುವ ಹವ್ಯಾಸದಿಂದ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಗ್ರಂಥಾಲಯಗಳಲ್ಲಿ ಲಭ್ಯವಿರುವ ನಿಯತಕಾಲಿಕೆ ಮೌಲ್ಯಯುತವಾದವು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನಿಯಮಿತವಾಗಿ ಭೇಟಿ ನೀಡಿ ಅಧ್ಯಯನ ಮಾಡುವುದು ಉಪಯುಕ್ತವಾದುದು ಎಂದು ಅವರು ಹೇಳಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ, ತಾವು ಮೈಸೂರು ಮಾನಸಗಂಗೋತ್ರಿಯ ವಿಶಾಲವಾದ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆಗಳಿಸಿಕೊಂಡ ಬಗೆಯನ್ನು ತಿಳಿಸಿದರು.

ಗ್ರಂಥಾಲಯಗಳಲ್ಲಿ ಪಠ್ಯಪುಸ್ತಕ ವಿಭಾಗ, ಅಧ್ಯಯನ ವಿಭಾಗವೆಂಬ ಹಲವಾರು ವಿಭಾಗಗಳಿವೆ ಎಂಬ ಪರಿಕಲ್ಪನೆ ಬಂದಿದ್ದೇ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆದರು.

ಓದುವುದು ಎಲ್ಲರಿಗು ಗೊತ್ತು ಆದರೆ ಓದುವ ಹವ್ಯಾಸವನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದನ್ನು ತಿಳಿಯಬೇಕು. ಪ್ರಸ್ತುತ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹಾರೈಸಿದರು.

ಧಾತ್ರಿ ಪ್ರಾರ್ಥಿಸಿದರು. ಸೌಮ್ಯಾ ನಿರೂಪಿಸಿದರು. ವಿದ್ಯಾರ್ಥಿಗಳು, ಗ್ರಂಥಾಲಯ ಸಿಬ್ಬಂದಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಭಾಗವಹಿಸಿದ್ದರು. ಗ್ರಂಥಪಾಲಕ ಟಿ.ಎಂ. ಮಾದೇಶ್‌ ಗೌಡ ಸ್ವಾಗತಿಸಿ, ಜ್ಯೋತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ
ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ