ಗೂಗಲ್ ಗೆ ನೀವು ಏನು ಪ್ರಶ್ನೆ ಕೇಳುತ್ತೀರೋ ಅದಕ್ಕೆ ಮಾತ್ರ ಉತ್ತರ ಕೊಡುತ್ತದೆ. ಆದರೆ, ಪುಸ್ತಕಗಳನ್ನು ಓದಿದರೆ ನಿಮ್ಮಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪುಸ್ತಕ ಓದುವ ಹವ್ಯಾಸ ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ. ಪುಸ್ತಕಗಳು ನಮ್ಮ ಉತ್ತಮ ಒಡನಾಡಿಯಾಗಬೇಕು. ಆಗ ಮಾತ್ರ ಓದುವ ಸಂಸ್ಕೃತಿ ಜೀವಂತವಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ಯುವಜನತೆ ರೀಲ್ಸ್ ನೋಡುವುದನ್ನು ಬಿಟ್ಟು ಒಂದು ಗಂಟೆ ಪುಸ್ತಕ ಹಿಡಿದರೆ ಅವರ ಜ್ಞಾನ ಹೆಚ್ಚಾಗುತ್ತದೆ. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ. ಜಿಎಸ್‌ಎಸ್ ಅವರಂತಹ ಕಾವ್ಯಗಳಿಗೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ ಇದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕ ಡಾ.ಬಿ.ಎಸ್. ಮಂಜುನಾಥ ಸ್ವಾಮಿ ಅಭಿಪ್ರಾಯಪಟ್ಟರು.
ಸಂವಹನ ಪ್ರಕಾಶನ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತಾಶ್ರಯದಲ್ಲಿ ಕಿರು ರಂಗಮಂದಿರಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂವಹನ ಪ್ರಕಟಿಸಿರುವ ಡಾ.ಡಿ.ಎ.ಶಂಕರ್ ಸಂಪಾದನೆಯ ‘ವಡ್ಡಾರಾಧನೆ’, ಗೌರಿಸತ್ಯ ಅವರ ‘ಒಡೆಯರ ಕಾಲದ ಮೈಸೂರು’, ಎಚ್.ವಿ.ನಾಗರಾಜರಾವ್ ಅವರ ‘ಸಂಸ್ಕೃತಿ ಸನ್ನಿಧಿ’ ಹಾಗೂ ಡಾ.ವೈ.ಸಿ. ಭಾನುಮತಿ ಸಂಪಾದನೆಯ ‘ಶಿವಗಣ ಚಾರಿತ್ರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಗೂಗಲ್ ಗೆ ನೀವು ಏನು ಪ್ರಶ್ನೆ ಕೇಳುತ್ತೀರೋ ಅದಕ್ಕೆ ಮಾತ್ರ ಉತ್ತರ ಕೊಡುತ್ತದೆ. ಆದರೆ, ಪುಸ್ತಕಗಳನ್ನು ಓದಿದರೆ ನಿಮ್ಮಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪುಸ್ತಕ ಓದುವ ಹವ್ಯಾಸ ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ. ಪುಸ್ತಕಗಳು ನಮ್ಮ ಉತ್ತಮ ಒಡನಾಡಿಯಾಗಬೇಕು. ಆಗ ಮಾತ್ರ ಓದುವ ಸಂಸ್ಕೃತಿ ಜೀವಂತವಾಗಿರುತ್ತದೆ ಎಂದರು.
ವಿದ್ಯೆ ಯಾರೂ ಕಿತ್ತುಕೊಳ್ಳಲಾಗದ ಶಕ್ತಿ. ಆದ್ದರಿಂದ ಇತಿಹಾಸದಲ್ಲಿ ರಾಜಮನೆತನಗಳು ಉನ್ನತ ವಿದ್ವಾಂಸ, ಪಂಡಿತರನ್ನು ತಮ್ಮ ಅರಮನೆಯಲ್ಲಿ ಇರಿಸಿಕೊಂಡು ಸಾಹಿತ್ಯ ಬರೆಸುತ್ತಿದ್ದರು. ಆಗ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯುಳ್ಳವರು ಇರುತ್ತಿದ್ದರು. ಆದರೆ, ಇಂದು. ಮೊಬೈಲ್ ಗಳಲ್ಲಿಯೇ ಓದುತ್ತೇವೆ ಅಥವಾ ಕಥೆಗಳನ್ನು ಕೇಳುತ್ತೇವೆ ಎನ್ನುವವರ ಸಂಖ್ಯೆ ಹೆಚ್ಚು ಎಂದರು.
ಡಾ.ಡಿ.ಎ.ಶಂಕರ್ ಸಂಪಾದನೆಯ ‘ವಡ್ಡಾರಾಧನೆ’ ಮತ್ತು ಗೌರಿಸತ್ಯ ಅವರ ‘ಒಡೆಯರ ಕಾಲದ ಮೈಸೂರು’ ಕೃತಿಗಳನ್ನು ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ. ವಸಂತಕುಮಾರ್ ಹಾಗೂ ವಿದ್ವಾನ್‌ಎಚ್.ವಿ. ನಾಗರಾಜರಾವ್ ಅವರ ‘ಸಂಸ್ಕೃತಿ ಸನ್ನಿಧಿ’ ಹಾಗೂ ಡಾ.ವೈ.ಸಿ. ಭಾನುಮತಿ ಸಂಪಾದನೆಯ ‘ಶಿವಗಣ ಚಾರಿತ್ರ’ ಕೃತಿಗಳನ್ನು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ಪರಿಚಯಿಸಿದರು.
ನಾಲ್ಕು ಕೃತಿಗಳ ಕರ್ತೃಗಳಾದ ಡಾ.ಡಿ.ಎ. ಶಂಕರ್, ಗೌರಿಸತ್ಯ, ವಿ.ಎಚ್.ವಿ. ನಾಗರಾಜರಾವ್ ಮತ್ತು ಡಾ.ವೈ.ಸಿ. ಭಾನುಮತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಕಿರಿಯ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ, ವರಕೋಡು ಪಿಯು ಕಾಲೇಜು ಪ್ರಾಂಶುಪಾಲರು ದೇವರಾಜು ಪಿ.ಚಿಕ್ಕಹಳ್ಳಿ. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.