ಎಸ್.ಜಾನಕಿ ಸ್ಮಾರಕ ನಿರ್ಮಾಣಕ್ಕೆ ಜಮೀನು ನೀಡಲು ನವೀನ್‌ ಒಲವು

KannadaprabhaNewsNetwork |  
Published : Jul 23, 2026, 01:15 AM IST
4 | Kannada Prabha

ಸಾರಾಂಶ

ಗಾಯಕರಾದ ಲತಾ ಹಂಸಲೇಖ, ಅನುರಾಧ ಭಟ್, ವಾಣಿ ಹರಿಕೃಷ್ಣ, ಅರ್ಚನಾ ಉಡುಪ, ಶಶಿಕಲಾ, ಇಂದು ನಾಗರಾಜ್, ಮೋಹನ್‌ ಕೃಷ್ಣ, ದರ್ಶನ್ ಮೆಳವಂಕಿ, ಪೃಥ್ವಿಭಟ್, ಕಂಬದ ರಂಗಯ್ಯ, ವ್ಯಾಸರಾಯ್ ಸೋಸಲೆ, ಅಜಯ್ ವಾರಿಯರ್ ಸೇರಿದಂತೆ ಪ್ರಮುಖ ಗಾಯಕರು ನೇರ ವಾದ್ಯಗೋಷ್ಠಿಯ ನೆರವಿನೊಂದಿಗೆ ಅಭೂತ ಪೂರ್ವ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಹಲವು ಭಾಷೆಗಳ ಹಾಡಿಗೆ ಧ್ವನಿಯಾದ ಗಾನ ಕೋಗಿಲೆ, ಗಾನವಿಶಾರದೆ, ಸರಳ ಹೃದಯದ ಎಸ್‌. ಜಾನಕಿ ಅವರಿಗೆ ಗಾಯನದ ಮೂಲಕವೇ ನುಡಿನಮನ ಸಲ್ಲಿಸಲಾಯಿತು.

ನಗರದ ದಟ್ಟಗಳ್ಳಿಯ ಸಾ.ರಾ. ಕಲ್ಯಾಣ ಮಂಟಪದಲ್ಲಿ ಬುಧವಾರ ಎಸ್‌. ಜಾನಕಿ ಚಾರಿಟಬಲ್‌ ಟ್ರಸ್ಟ್‌ ಆಯೋಜಿಸಿದ್ದ ಜಾನಕಿ ನಮನ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕರು ಪಾಲ್ಗೊಂಡು ತಮ್ಮ ನೆಚ್ಚಿನ ಗಾಯಕಿಗೆ ನುಡಿನಮನ ಸಲ್ಲಿಸಿದರು.

ತನ್ನ ಕೊನೆಯ ದಿನಗಳನ್ನು ತಮ್ಮ ನೆಚ್ಚಿನ ಮೈಸೂರಿನಲ್ಲಿಯೇ ಕಳೆದು ಇಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಕೇಳಿಕೊಂಡ ಜಾನಕಿ ಅವರಿಗೆ ಅವರೇ ಹಾಡಿದ ಹಾಡುಗಳ ಸ್ಮರಣೆಯೊಂದಿಗೆ ನಮನ ಸಲ್ಲಿಸಲಾಯಿತು.

ಸಂಗೀತ ನಿರ್ದೇಶಕ ಹಂಸಲೇಖ ನೇತೃತ್ವದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅವರ ಗೀತೆಗಳನ್ನು ಪ್ರಸ್ತುತಪಡಿಸಿ, ಸಂಗೀತ ಪ್ರಿಯರಿಗೆ ಮತ್ತು ಪಾಲ್ಗೊಂಡಿದ್ದವರಿಗೆ ಜಾನಕಮ್ಮನ ನೆನಪು ಮೂಡಿಸಿದರು.

ಗಾಯಕರಾದ ಲತಾ ಹಂಸಲೇಖ, ಅನುರಾಧ ಭಟ್, ವಾಣಿ ಹರಿಕೃಷ್ಣ, ಅರ್ಚನಾ ಉಡುಪ, ಶಶಿಕಲಾ, ಇಂದು ನಾಗರಾಜ್, ಮೋಹನ್‌ ಕೃಷ್ಣ, ದರ್ಶನ್ ಮೆಳವಂಕಿ, ಪೃಥ್ವಿಭಟ್, ಕಂಬದ ರಂಗಯ್ಯ, ವ್ಯಾಸರಾಯ್ ಸೋಸಲೆ, ಅಜಯ್ ವಾರಿಯರ್ ಸೇರಿದಂತೆ ಪ್ರಮುಖ ಗಾಯಕರು ನೇರ ವಾದ್ಯಗೋಷ್ಠಿಯ ನೆರವಿನೊಂದಿಗೆ ಅಭೂತ ಪೂರ್ವ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಈ ವೇಳೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶೈಲಜಾ ಸುದರ್ಶನ್, ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್, ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಶರ್ಮ, ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಎಸ್. ಜಾನಕಿ ಅವರ ಸೊಸೆ ಉಮಾ ಮುರುಳಿ, ಮೊಮ್ಮಗಳು ಅಪ್ಸರಾ, ಅಳಿಯ ಗಣೇಶ್, ಆಪ್ತ ಸಹಾಯಕ ಹಾಗೂ ಎಸ್. ಜಾನಕಿ ಚಾರಿಟಬಲ್ ಟ್ರಸ್ಟ್‌ಅಧ್ಯಕ್ಷ ನವೀನ್, ಉಪಾಧ್ಯಕ್ಷ ಪವನ್‌ ಕುಮಾರ್, ಪದಾಧಿಕಾರಿಗಳಾದ ಶಿವಕುಮಾರ್, ಸಿದ್ದರಾಜ್, ಅರುಣ್ ಸಾಗರ್ ಎಲ್ಲರೂ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಲ್ಲಿಸಿದರು.

ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಮೈಸೂರಿನಲ್ಲಿ ಭವ್ಯವಾದ ಸ್ಮಾರಕ ನಿರ್ಮಿಸಲು ಉದ್ದೇಶಿಸಿದ್ದು, ಈ ಸಂಬಂಧ ಅವರ ಅಭಿಮಾನಿ ನವೀನ್‌ ಜಮೀನು ನೀಡಲು ಒಪ್ಪಿದ್ದಾರೆ ಎಂದರು.

ಮೈಸೂರಿನ ದಟ್ಟಗಳ್ಳಿ ಸಮೀಪದ ಆರ್.ಟಿ. ನಗರದಲ್ಲಿ 40x60 ಅಳತೆ ನಿವೇಶನವನ್ನು ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬಳಿಕ ಜಾನಕಿ ಅವರ ಆಪ್ತ ನವೀನ್ ತಮ್ಮ ತೋಟದಲ್ಲಿಯೇ ಸ್ಮಾರಕ ನಿರ್ಮಿಸಲು ಆಸಕ್ತಿ ತೋರಿದ್ದಾರೆ. ಜಮೀನನ್ನು ಸರ್ಕಾರಕ್ಕೆ ಕೊಡಲು ನಿರ್ಧರಿಸಿದ್ದಾರೆ ಎಂದರು.

ಸ್ಮಾರಕ ನಿರ್ಮಾಣ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಅವರು ಸಹಮತ ಸೂಚಿಸಿದ್ದಾರೆ. ಸ್ಮಾರಕವು ಜಾನಕಿ ಅಮ್ಮ ಅವರ ಹೆಸರಿನಲ್ಲೇ ಸಾರ್ವಜನಿಕರಿಗೆ ಮುಕ್ತವಾಗಿರಬೇಕು, ಯಾವುದೇ ರೀತಿಯಲ್ಲಿ ಖಾಸಗೀಕರಣ ಅಥವಾ ಬೇಲಿ ಹಾಕುವಂತಿರಬಾರದು ಎಂದು ಹೇಳಿದ್ದಾರೆ ಎಂದರು.

ಅಂದಾಜು 2 ರಿಂದ 4 ಕೋಟಿ ರು. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲು ನೀಲಿ ನಕ್ಷೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇಲ್ಲಿ ಸ್ಮಾರಕ ನಿರ್ಮಾಣವಾದರೆ ದೇಶದ ವಿವಿಧ ಭಾಗಗಳಿಂದ ಅಭಿಮಾನಿಗಳು ಭೇಟಿ ನೀಡಲಿದ್ದು, ನಗರದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದರು.

ಮಾಜಿ ಸಂಸದ ಪ್ರತಾಪ್ ಸಿಂಹ ಜಾನಕಿಮ್ಮ ಅವರಿಗೆ ಭಾರತ ರತ್ನ ನೀಡಬೇಕು. ಅವರು ತಮ್ಮ ಜೀವನದ ಕೊನೆಯ ಎಂಟು ವರ್ಷಗಳನ್ನು ಮೈಸೂರಿನಲ್ಲಿ ಕಳೆದಿರುವುದು ನಗರದ ಭಾಗ್ಯ ಎಂದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭೀಮಸೇನ್ ಜೋಶಿ ಹಾಗೂ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ನೀಡಲಾಗಿತ್ತು. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಎಸ್. ಜಾನಕಿ, ಕೆ.ಎಸ್. ಚಿತ್ರಾ, ಇಳಯರಾಜಾ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರಂತಹ ಮಹಾನ್ ಕಲಾವಿದರ ಸೇವೆಯನ್ನು ಭಾರತ ಸರ್ಕಾರ ಗುರುತಿಸಿ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಅವರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ: ಮೋದಿ ಜವಾಬ್ದಾರಿ ಹೊರಲಿ
ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಕೈಜೋಡಿಸಿ