ಎನ್‌ಡಿಎ ಸರ್ಕಾರ ವಿದ್ಯಾರ್ಥಿ ಹಕ್ಕುಗಳನ್ನು ಹತ್ತಿಕ್ಕುತ್ತಿದೆ: ಎಚ್.ಎ. ವೆಂಕಟೇಶ್‌

KannadaprabhaNewsNetwork |  
Published : Jul 23, 2026, 01:15 AM IST
38 | Kannada Prabha

ಸಾರಾಂಶ

ನೀಟ್ ಪೇಪರ್ ಸೋರಿಕೆ ಒಂದು ವ್ಯವಸ್ಥಿತ ಷಡ್ಯಂತ್ರ. ಇದರಿಂದಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಪ್ರಧಾನಿ ನರೇಂದ್ರ ಮೋದಿ ನಾಚಿಕೆ ಬಿಟ್ಟು ರಕ್ಷಿಸಿಕೊಳ್ಳುತ್ತಿರುವುದು ದುರಂತ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್.ಡಿಎ ಸರ್ಕಾರ ವಿದ್ಯಾರ್ಥಿ ಯುವಜನರ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್‌ ಕಿಡಿಕಾರಿದ್ದಾರೆ.

ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ ಪ್ರಧಾನಮಂತ್ರಿ ಸಂಸತ್ತಿನಿಂದ ಪಲಾಯನ ಮಾಡುತ್ತಿದ್ದಾರೆ. ಜನತೆಯ ಪ್ರತಿಭಟನೆ, ನ್ಯಾಯಯುತ ಸಭೆ ನಡೆಸುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಹಿನ್ನೆಲೆ ಭಾರತದ ಪ್ರಜೆಗಳು, ದೇಶದ ಸಂವಿಧಾನದ ಆರ್ಟಿಕಲ್ 32ರಲ್ಲಿ ತಮಗೆ ದತ್ತವಾಗಿರುವ ಅಧಿಕಾರದನ್ವಯ ರಿಟ್ ಅರ್ಜಿಗಳನ್ನು ದಾಖಲಿಸಿ, ಕೇಂದ್ರ ಸರ್ಕಾರದ ಏಕಸ್ವಾಮ್ಯ ಹಾಗೂ ಹಕ್ಕುಗಳ ಹರಣ ನೀತಿಯನ್ನು ಪ್ರಶ್ನಿಸುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ನೀಟ್ ಹಗರಣ, ವೋಟ್ ಚೋರಿ;

ಚಂದಾ ಚೋರಿ ಸೇರಿದಂತೆ ಹತ್ತಾರು ಹಗರಣಗಳಲ್ಲಿ ಮುಳುಗಿರುವ ಅನೈತಿಕ ನಡವಳಿಕೆಯ ಈ ಬಿಜೆಪಿ ಸರ್ಕಾರ ಸಂಪೂರ್ಣ ಸರ್ವಾಧಿಕಾರಿ ಧೋರಣೆ ತಳೆದಿದೆ.

ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೇ ವಶಕ್ಕೆ ಪಡೆದು ಜನರ ದನಿ ಉಡುಗಿಸುವ ಪ್ರಯತ್ನ ನಡೆಸುತ್ತಿದೆ. ಇದು ಬಹಳ ಸ್ಪಷ್ಟವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಆರ್ಟಿಕಲ್ 19 (1)(ಬಿ) ಅನ್ವಯ ನೀಡಿರುವ ಶಾಂತಿಯುತ ಪ್ರತಿಭಟನೆ, ಸಭೆ ನಡೆಸುವ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವ್ಯವಸ್ಥಿತ ಷಡ್ಯಂತ್ರ:

ನೀಟ್ ಪೇಪರ್ ಸೋರಿಕೆ ಒಂದು ವ್ಯವಸ್ಥಿತ ಷಡ್ಯಂತ್ರ. ಇದರಿಂದಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಪ್ರಧಾನಿ ನರೇಂದ್ರ ಮೋದಿ ನಾಚಿಕೆ ಬಿಟ್ಟು ರಕ್ಷಿಸಿಕೊಳ್ಳುತ್ತಿರುವುದು ದುರಂತ.

ಪ್ರಜೆಗಳ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ದೇಶದ ಸರ್ವೋನ್ನತ ಸಾಂವಿಧಾನಿಕ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕು. ಜೊತೆಗೆ ರಾಷ್ಟ್ರಪತಿಯವರು ಸಹ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಜನತೆಯ ಹಕ್ಕುಗಳ ರಕ್ಷಣೆಗೆ ಕಾವಲಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ದೇಶದ ಯಾವುದೇ ಪ್ರಜೆ ತನ್ನ ಹಕ್ಕಿನ ರಕ್ಷಣೆಗಾಗಿ ಆರ್ಟಿಕಲ್ 32ರನ್ವಯ ಸರ್ವೋಚ್ಚ ನ್ಯಾಯಾಲಯವನ್ನು ನೇರವಾಗಿ ಸಂಪರ್ಕಿಸಬಹುದಾದ ಅಧಿಕಾರವನ್ನು ಬಾಬಾ ಸಾಹೇಬರು ನೀಡಿದ್ದಾರೆ. ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಪರಿಗಣಿಸಲ್ಪಡುವ ಈ ಆರ್ಟಿಕಲ್ 32ರ ಮೂಲಕ ದೇಶದ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ನ್ಯಾಯಾಂಗದ ಕದ ತಟ್ಟಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ: ಮೋದಿ ಜವಾಬ್ದಾರಿ ಹೊರಲಿ
ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಕೈಜೋಡಿಸಿ