ಕನ್ನಡಪ್ರಭ ವಾರ್ತೆ ಮೈಸೂರು
ನೀಟ್ ಪರೀಕ್ಷೆ ಜಾಗೃತಿ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಲು ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಮಹಾರಾಣಿ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಸಂತಾಪ ಸೂಚಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಎಲ್.ಇಡಿ ಪರದೆಯಲ್ಲಿ ರಾಹುಲ್ ಗಾಂಧಿ ಭಾವಚಿತ್ರ ಪ್ರದರ್ಶಿಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ನಗರಾಧ್ಯಕ್ಷ ಎಲ್.ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟಿಸಿದರು.
ಕಾಂಗ್ರೆಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮೃತ ವಿದ್ಯಾರ್ಥಿಗಳ ಭಾವಚಿತ್ರಗಳ ಜತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋವನ್ನು ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹಾಗೂ ಅವರ ಬೆಂಬಲಿಗರು, ಕಾಲೇಜು ಆವರಣದಲ್ಲಿ ಮೃತ ವಿದ್ಯಾರ್ಥಿಗಳ ಬ್ಯಾನರ್ ಹಾಗೂ ರಾಹುಲ್ ಗಾಂಧಿ ಭಾವಚಿತ್ರ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಪವಿತ್ರವಾದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಪ್ರಚೋದಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆತರಲಾಗುತ್ತಿದೆ ಎಂದು ಕಿಡಿಕಾರಿದರು.ಆತ್ಮಹತ್ಯೆಗೆ ಶರಣಾದ ಅಮಾಯಕ ವಿದ್ಯಾರ್ಥಿಗಳ ಶ್ರದ್ಧಾಂಜಲಿಯಲ್ಲಿ ರಾಹುಲ್ ಗಾಂಧಿ ಫೋಟೋ ಹಾಕುವ ಅಗತ್ಯವೇನಿತ್ತು?, ಸ್ಥಳದಲ್ಲಿದ್ದ ಬ್ಯಾನರ್ ತೆರವುಗೊಳಿಸಿ, ಎಲ್.ಇ.ಡಿ ಪ್ರದರ್ಶನ ಸ್ಥಗಿತಗೊಳಿಸಿದರು.
ಬಳಿಕ ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ತೆರಳಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನೆಲದ ಮೇಲೆ ಕುಳಿತು ಪ್ರತಿಭಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರಿಗೆ ಶಾಲೆಗಳಲ್ಲಿ ರಾಜಕೀಯ ಮಾಡಲು ಅವಕಾಶ ನೀಡುವುದಾದರೆ, ನಾಳೆಯಿಂದ ನಮಗೂ ಶಾಲಾ ಆವರಣದಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ನೀಡಿ ಎಂದು ಅವರು ಒತ್ತಾಯಿಸಿದರು.
ಇದು ನೀಟ್ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕಾರ್ಯಕ್ರಮ ಎಂದು ನಾನು ತಿಳಿದಿದ್ದೆ. ಕಾರ್ಯಕ್ರಮ ಮಾಡುವ ವಿಚಾರವಾಗಿ ಸ್ಥಳೀಯ ಶಾಸಕರು ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪತ್ರದ ಅನುಸಾರ ನಾನು ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೆ. ರಾಹುಲ್ ಗಾಂಧಿ ಅವರ ಫೋಟೋ ಹಾಕಿರುವುದು ನನ್ನ ಗಮನಕ್ಕೆ ಬಂದಿಲ್ಲ. ಮೇಲಧಿಕಾರಿಗಳ ಆದೇಶ ಪಾಲಿಸಿದ್ದೇನೆ. ವಿಷಯ ತಿಳಿದ ಬಳಿಕ ಬ್ಯಾನರ್ ತೆಗೆಸಲಾಗಿದೆ.
- ಕೆ.ಹರೀಶ್ ಗೌಡ, ಶಾಸಕರು