ಪುಸ್ತಕಗಳು ಜ್ಞಾನದ ಸಂಪತ್ತಾಗಬೇಕು: ಡಾ. ಕುಶಾಲ್ ಬರಗೂರು

KannadaprabhaNewsNetwork |  
Published : Jul 29, 2026, 01:30 AM IST
28ಎಚ್ಎಸ್ಎನ್4 : ಹೊಳೆನರಸೀಪುರದ ಸೀತವಿಲಾಸ ರಸ್ತೆಯಲ್ಲಿ ಇರುವ ಹಿರಿಯ ಪತ್ರಕರ್ತ ಬಾ.ರಾ.ಸು. ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ.ಕುಶಾಲ್ ಬರಗೂರು ಉಪಸ್ಥಿತಿಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಟಾನ ಸಮಾರಂಭವನ್ನು ಆಯೋಜಿಸಲಾಗಿತ್ತು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಪುಸ್ತಕವು ಕೇವಲ ಒಂದು ವಸ್ತುವಾಗದೇ ಮನೆ ಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವವನ್ನು ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಅಶಯದ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದದ್ದು ಕನ್ನಡ ಪುಸ್ತಕ ಪ್ರಾಧಿಕಾರ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪುಸ್ತಕಗಳು ಕೇವಲ ಒಂದು ವಸ್ತುವಾಗದೇ ಮನೆ ಮನದಲ್ಲಿ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವ ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಅಶಯದ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ರಾಜ್ಯದ್ಯಾಂತ ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ತಿಳಿಸಿದರು.ಪಟ್ಟಣದ ಸೀತವಿಲಾಸ ರಸ್ತೆಯಲ್ಲಿ ಇರುವ ಹಿರಿಯ ಪತ್ರಕರ್ತ ಬಾ.ರಾ.ಸು. ಅವರ ಮನೆಯಲ್ಲಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಪುಸ್ತಕವು ಕೇವಲ ಒಂದು ವಸ್ತುವಾಗದೇ ಮನೆ ಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವವನ್ನು ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಅಶಯದ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದದ್ದು ಕನ್ನಡ ಪುಸ್ತಕ ಪ್ರಾಧಿಕಾರ. ಮನೆಗೊಂದು ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಆ ಊರಿನ ಸಂಸ್ಕೃತಿ, ಪರಂಪರೆ, ಸಾಹಿತಿಗಳು ಹಾಗೂ ಕಲಾವಿದರನ್ನು ಪರಿಚಯಿಸುವ ಜೊತೆಗೆ ಅವರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಲು ಪ್ರತಿ ತಿಂಗಳು ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ವಿನೂತನ ಕಾರ್ಯಕ್ರಮ ಸಹ ಆಯೋಜಿಸಲಾಗುತ್ತಿದೆ. ಜತೆಗೆ ತಿಂಗಳಿಗೊಬ್ಬರು ಸಾಹಿತಿಯನ್ನು ಪರಿಚಯಿಸುವ ಆಶಯ ಸಹ ಹೊಂದಲಾಗಿದೆ ಎಂದು ತಿಳಿಸಿದರು. ನಂತರ ಕನ್ನಡ ಪುಸ್ತಕಗಳನ್ನು ಪ್ರೀತಿಸೋಣ. ಕನ್ನಡ ಸಂಸ್ಕೃತಿ ಹಂಚೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಮನೆಗೊಂದು ಗ್ರಂಥಾಲಯದ ಮಹತ್ವ ಸಾರುವ ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಗೊರೂರು ಅನಂತರಾಜು ವಹಿಸಿದ್ದರು.

ಮಾಜಿ ಕಸಾಪ ಅಧ್ಯಕ್ಷ ಡಿ.ಕೆ.ಕುಮಾರಯ್ಯ ಹಾಗೂ ತಾಲೂಕು ಕನ್ನಡ ಪುಸ್ತಕ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಎಂ.ನಾಗರಾಜು ಮಾತನಾಡಿದರು.

ಇಂದಿರಾ ಬಾರಾಸು ಪ್ರಾರ್ಥಿಸಿದರು ಹಾಗೂ ಕುಮಾರ್ ಚಲವಾದಿ ನಿರೂಪಿಸಿದರು. ಸಭೆಯಲ್ಲಿ ಆಕ್ರಾಂತ್ ರವಿಕುಮಾರ್, ವಾಸುದೇವ ಮೂರ್ತಿ, ವೈ.ವಿ.ಚಂದ್ರಶೇಖರ್, ಸ್ವರೂಪ್, ರಂಗನಾಥ ಶೆಟ್ಟಿ, ನರಸಿಂಹ, ಪ್ರೇಮ ಮಂಜುನಾಥ್, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್