ಚಂದ್ರು ಕೊಂಚಿಗೇರಿ ಹಂಪಿ
ಪ್ರತಿ ಸಲ ಹಂಪಿ ಉತ್ಸವದಲ್ಲಿ ಪುಸ್ತಕ ಮಳಿಗೆಗಳಿಗೆ ಜಾಗವನ್ನು ಉಚಿತವಾಗಿ ನೀಡಲಾಗುತ್ತಿತ್ತು, ಆದರೆ ಈ ಬಾರಿ ದಿನಕ್ಕೆ ಸಾವಿರ ರುಗಳ ಶುಲ್ಕ ಜಿಲ್ಲಾಡಳಿತ ವಿಧಿಸಿದೆ. ಇದರಿಂದ ಕೇವಲ 5 ಪುಸ್ತಕ ಮಳಿಗೆಗಳು ಬಂದಿದ್ದು, ಪುಸ್ತಕ ಖರೀದಿ ಹೇಳಿಕೊಳ್ಳುವ ಮಟ್ಟಕ್ಕಿಲ್ಲ, ಇದರಿಂದ ನಮಗೆ ಹೊರೆಯಾಗುತ್ತಿದೆ ಎಂದು ಪ್ರಕಾಶಕರು ತಮ್ಮ ನೋವು ಹೊರ ಹಾಕಿದರು.ವಿಶ್ವ ವಿಖ್ಯಾತ ಹಂಪಿ ಉತ್ಸವದ ಮಾತಂಗ ಪರ್ವತ ಪ್ರದೇಶದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಯಲ್ಲೇ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಕಾಶನ ಮತ್ತು ಕಲಬುರಗಿಯ ಸಪ್ನಾ ಬುಕ್ ಹೌಸ್ ಬಿಟ್ಟರೇ ಉಳಿದಂತೆ ಸಣ್ಣ ಪುಟ್ಟ ಪುಸ್ತಕ ಮಳಿಗೆಗಳು ಸೇರಿದಂತೆ ಕೇವಲ 5 ಪುಸ್ತಕ ಮಳಿಗೆ ಇದ್ದವು. ಪ್ರತಿ ಬಾರಿ ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ 50ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಬರುತ್ತಿದ್ದವು, ಜತೆಗೆ ಜನರ ಅಭಿರುಚಿಗೆ ತಕ್ಕಂತೆ ಪುಸ್ತಕಗಳು ಸಿಗುತ್ತಿದ್ದವು. ಈ ಬಾರಿ ಅತಿ ಕಡಿಮೆ ಪುಸ್ತಕ ಪ್ರಕಾಶನ ಬಂದಿರುವ ಹಿನ್ನೆಲೆಯಲ್ಲಿ ಪುಸ್ತಕ ಪ್ರಿಯರಿಗೆ ನಿರಾಸೆ ಉಂಟಾಗಿತ್ತು.ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಕಾಶನದಿಂದ ಶೇ.50 ರಷ್ಟು ರಿಯಾಯ್ತಿಯಲ್ಲಿ ಪುಸ್ತಕಗಳು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಕಳೆದ 2 ದಿನಗಳಿಂದ ಕೇವಲ ₹ 50 ಸಾವಿರಗಳ ಪುಸ್ತಕಗಳು ಮಾರಾಟವಾಗಿದ್ದವು. ಪುಸ್ತಕ ಪ್ರಿಯರಿಗೆ ಬೇಡಿಕೆ ಇರುವ ಶಾಸನಗಳು, ಇತಿಹಾಸ, ಐತಿಹಾಸಿಕ ಹಂಪಿ ಕುರಿತಾಗಿರುವ ಪುಸ್ತಕಗಳು, ಗ್ರಾಮಗಳ ಇತಿಹಾಸ, ಪುರಾತತ್ವ ಸೇರಿದಂತೆ ಸೃಜನಶೀಲ ಸಾಹಿತ್ಯ ಪುಸ್ತಕಗಳು ಲಭ್ಯತೆ ಇರಲಿಲ್ಲ, ಉಳಿದಂತೆ ಸಂಶೋಧನ ಕೃತಿಗಳು ಸೇರಿದಂತೆ 600ಕ್ಕೂ ಹೆಚ್ಚು ಟೈಟಲ್ ಹೊಂದಿರುವ ಪುಸ್ತಕಗಳು ಇದ್ದವು. ಆದರೂ ಹಂಪಿ ವಿವಿಯ ಪುಸ್ತಕ ಪ್ರಕಾಶನದಲ್ಲಿ ತಕ್ಕ ಮಟ್ಟಿಗೆ ಪುಸ್ತಕಗಳನ್ನು ಸಾಹಿತ್ಯಾಸ್ತಕರು ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ.
ಈ ಹಿಂದೆ ಪುಸ್ತಕ ಮಳಿಗೆಗಳಿಗೆ ಜಾಗವನ್ನು ಉಚಿತವಾಗಿ ನೀಡುತ್ತಿದ್ದರು, ಆದ ಈ ಬಾರಿ ದಿನಕ್ಕೆ ಸಾವಿರ ರುಗಳ ಶುಲ್ಕ ವಿಧಿಸಿದ್ದಾರೆ, ಸಾಹಿತ್ಯಾಸ್ತಕರಿಗೆ ಸೃಜನಶೀಲ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಪ್ರಚಾರದ ಕೊರತೆಯೋ ಗೊತ್ತಿಲ್ಲ ಆದರೆ ಪುಸ್ತಕ ಮಳಿಗೆಗಳು ಕಡಿಮೆ ಇವೆ. ಹಂಪಿ ಕನ್ನಡ ವಿವಿಯ ಪ್ರಕಾಶನದಿಂದ ಮೂರು ದಿನಗಳ ವರೆಗೂ ಒಂದುವರೆ ಲಕ್ಷ ರುಗಳ ಪುಸ್ತಕ ಮಾರಾಟವಾಗಲಿದೆ ಎನ್ನುತ್ತಾರೆ ಹಂಪಿ ಕನ್ನಡ ವಿವಿಯ ನಿರ್ದೇಶಕ ಮಾದವ ಪೆರಾಜೆ.ಮೊದಲ ಬಾರಿಗೆ ಕಲಬುರುಗಿಯ ಸಪ್ನಾ ಬುಕ್ ಹೌಸ್ ಪುಸ್ತಕ ಮಳಿಗೆ ಹಂಪಿ ಉತ್ಸವಕ್ಕೆ ಬಂದಿದ್ದರು, ಸಾವಿರಾರು ಬಗೆಯ ಉತ್ತಮ ಪುಸ್ತಕಗಳು ಪ್ರದರ್ಶನದಲ್ಲಿದ್ದವು, ಜನ ಹಿಂಡು ಹಿಂಡಾಗಿ ಬಂದು ಪುಸ್ತಕ ವೀಕ್ಷಣೆ ಮಾಡುತ್ತಾರೆ ಹೊರತು, ಖರೀದಿ ಮಾಡುತ್ತಿಲ್ಲ, ಪುಸ್ತಕ ಮಳಿಗೆ ಉಚಿತವಾಗಿ ನೀಡಿಲ್ಲ, ದೂರದಿಂದ ಪುಸ್ತಕಗಳನ್ನು ತಂದಿದ್ದೇವೆ ಆ ಸಾರಿಗೆ ಖರ್ಚನ್ನು ಭರಿಸುವುದು ಕಷ್ಟಕರವಾಗಿದೆ. ಜನರ ಬೇಡಿಕೆ ಹಾಗೂ ಅವರ ಸಾಹಿತ್ಯ ಅಭಿರುಚಿಗೆ ತಕ್ಕದಾದ ಪುಸ್ತಕಗಳಿವೆ, ಆದರೆ ಖರೀದಿಯಾಗುತ್ತಿಲ್ಲ ಎನ್ನುತ್ತಾರೆ ಸಪ್ನಾ ಬುಕ್ ಹೌಸ್‌ನ ನಿತೀಶ ಸಿ.ಭಂಡಾರಿ.
ಕಳೆದ ಬಾರಿ ಹಂಪಿ ಉತ್ಸವದಲ್ಲಿ ಪ್ರತಿ ಪುಸ್ತಕ ಮಳಿಗೆಗಳಲ್ಲಿ ಲಕ್ಷಾಂತರ ರುಗಳ ಪುಸ್ತಕಗಳು ಮಾರಾಟವಾಗಿದ್ದವು. ಆದರೆ ಈ ಬಾರಿ ಪುಸ್ತಕ ಖರೀದಿದಾರರ ಸಂಖ್ಯೆ ಅತಿ ಕಡಿಮೆ ಇದೆ. ಹಂಪಿ ಉತ್ಸವಕ್ಕೆ ಬರುವ ಲಕ್ಷಾಂತರ ಪ್ರವಾಸಿಗರು ವಸ್ತು ಪ್ರದರ್ಶನಕ್ಕೆ ಆಗಮಿಸುತ್ತಾರೆ, ಸರ್ಕಾರ ವಿವಿಧ ಇಲಾಖೆಯ ವಸ್ತು ಪ್ರದರ್ಶನ ನೋಡಿ ಹಾಗೆಯೇ ಹೋಗುತ್ತಿದ್ದಾರೆ, ಪುಸ್ತಕ ಮಳಿಗೆ ಕಡೆಗೆ ಬರುವವ ಸಂಖ್ಯೆ ಕಡಿಮೆ ಇದೆ. ಜತೆಗೆ ಈ ಬಾರಿ ಕೊನೆಯ ಭಾಗದಲ್ಲಿ ಪುಸ್ತಕ ಮಳಿಗೆಗಳಿಗೆ ಜಾಗ ನೀಡಿದ್ದಾರೆ.ಆವಿಷ್ಕಾರ ಪ್ರಗತಿ ಪರ ಸಂಸ್ಕೃತಿಕ ವೇದಿಕೆ ಹೊಸಪೇಟೆ ಇವರು ಹಾಕಿರುವ ಪುಸ್ತಕ ಮಳಿಗೆಗಳಲ್ಲಿ ಉತ್ತಮ ಪುಸ್ತಕಗಳಿದ್ದವು, ಜನರು ಆಸಕ್ತಿಯಿಂದ ಖರೀದಿ ಮಾಡಿದ್ದಾರೆ, ಪುಸ್ತಕದ ಬೆಲೆ ಅತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹೆಚ್ಚು ಅನುಕೂಲವಾಗುವ ಪುಸ್ತಕಗಳಿದ್ದು ಖರೀದಿ ಮಾಡಿದ್ದಾರೆ.ಉಳಿದಂತೆ ಚಿಕ್ಕ ಮಕ್ಕಳ ಜ್ಞಾನ ಹೆಚ್ಚಳಕ್ಕೆ ಅನುಕೂಲವಾಗುವಂತಹ ಪುಸ್ತಕ, ಗ್ರಾಮರ್ ಸೇರಿದಂತೆ ಇನ್ನಿತರ ಪುಸ್ತಕಗಳು ತಕ್ಕ ಮಟ್ಟಿಗೆ ಖರೀದಿಯಾಗಿವೆ.