ಕನ್ನಡಪ್ರಭ ವಾರ್ತೆ ವಿಜಯಪುರ
ಓದನ್ನು ಅತ್ಯಂತ ಮನೋಜ್ಞವಾಗಿ ಹೇಳಿ ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಬಡಿದೆಬ್ಬಿಸಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಮೇಶ ಬಲ್ಲಿದ ಹೇಳಿದರು.ನಗರದ ಹೊರವಲಯದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಶಾಲೆ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೇಸಿಗೆ ಶಿಬಿರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡತನವೆಂಬುದು ವ್ಯಕ್ತಿಗೆ ವರವೇ ಹೊರತು ಶಾಪವಲ್ಲ. ಬಡತನವು ಶ್ರಮದ ಹಾದಿಯ ಮೂಲಕ ಯಶಸ್ಸಿನಡೆಗೆ ಕರೆದುಕೊಂಡು ಹೋಗಲು ಸಹಾಯಕಾರಿ ಆಗುತ್ತದೆ ಎಂದರು.
ವ್ಯಕ್ತಿತ್ವ ವಿಕಸನ ತರಬೇತುದಾರ ಮಹದೇವ ಬಸರಕೋಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಗಾಧ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ಅದನ್ನು ಗುರುತಿಸಿ ಹೊರತರುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಶ್ರದ್ಧೆ, ವಿನಯ, ಸಂಯಮ ಹಾಗೂ ಜೀವನದಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಹಾಗೂ ದೇಶದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಸಬೇಕು ಎಂದರು.ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಡಾ.ಶಿವಾನಂದ ಕೆಲೂರ ಮಾತನಾಡಿ, ವಿದ್ಯಾರ್ಥಿಯ ಯಶಸ್ಸಿಗೆ ಜ್ಞಾನವೇ ಶಕ್ತಿ. ಆ ಜ್ಞಾನವನ್ನು ಸಂಪಾದನೆ ಮಾಡಬೇಕಾದರೆ ಸಂಯಮ ಬೇಕು. ಸಾಧಿಸುವ ಛಲವನ್ನು ಬೆಳಿಸಿಕೊಳ್ಳಬೇಕು ಎಂದು ಹೇಳಿದರು.
2025ರ ವಿದ್ಯಾರ್ಥಿಗಳಾದ ಸಮರ್ಥ ಪಾಟೀಲ (621 ಅಂಕ), ಕಾವೇರಿ ಹಾಲಡಕಿ (620 ಅಂಕ), ಓಂಕಾರ ಸತಾರಿ (620 ಅಂಕ), ಶಿವನಗೌಡ ಬಿರಾದಾರ (619 ಅಂಕ), ರಕ್ಷಿತಾ ಕೂಟ್ನುರ (617 ಅಂಕ), ಅಖೀಲ ಜಂಗಮಶೆಟ್ಟಿ (616 ಅಂಕ), ಅಮೃತಾ ಕೋರಿ (615 ಅಂಕ), ಶೃಷ್ಠಿ ಅಜನಾಳ (615 ಅಂಕ), ಸೌಜನ್ಯಾ ಜೈನಾಪುರ (613 ಅಂಕ) ಮತ್ತು ಆದಿತ್ಯಾ ಬರಸಕಾಳೆ (611 ಅಂಕ) ಇವರಿಗೆ ಸನ್ಮಾನ ಹಾಗೂ ನಗದು ಬಹುಮಾನವನ್ನು ವಿತರಿಸಿದರು.ಮುಖ್ಯಗುರುಗಳಾದ ತುಳಜಾರಾಮ ಸುಕ್ತೆ, ಎಸ್.ಬಿ.ಹೆಗಳಾಡಿ, ಮಹಾದೇವಪ್ರಸಾದ ಕುಲಕರ್ಣಿ, ಶಿಕ್ಷಕಿಯರಾದ ರಮ್ಯಾ ಗಟನಟ್ಟಿ, ರುಚಿತಾ ಗಟನಟ್ಟಿ, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.