ಬೂತ್ ಮಟ್ಟದ ಏಜೆಂಟರು ಕೇವಲ ಪಕ್ಷದ ಕಾರ್ಯಕರ್ತರಲ್ಲ, ಪ್ರಜಾಪ್ರಭುತ್ವದ ಮುಂಚೂಣಿ ಸೈನಿಕರು. ಚುನಾವಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗೆಲ್ಲುವುದಿಲ್ಲ, ಮನೆ ಮನೆಗೆ ತಲುಪಿ, ಪ್ರತಿಯೊಂದು ಮತವನ್ನು ರಕ್ಷಿಸುವ ಮೂಲಕವೇ ಗೆಲವು ಸಾಧ್ಯವೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೇಳಿದ್ದಾರೆ.
ಮೂಲ್ಕಿ: ಬೂತ್ ಮಟ್ಟದ ಏಜೆಂಟರು ಕೇವಲ ಪಕ್ಷದ ಕಾರ್ಯಕರ್ತರಲ್ಲ, ಪ್ರಜಾಪ್ರಭುತ್ವದ ಮುಂಚೂಣಿ ಸೈನಿಕರು. ಚುನಾವಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗೆಲ್ಲುವುದಿಲ್ಲ, ಮನೆ ಮನೆಗೆ ತಲುಪಿ, ಪ್ರತಿಯೊಂದು ಮತವನ್ನು ರಕ್ಷಿಸುವ ಮೂಲಕವೇ ಗೆಲವು ಸಾಧ್ಯವೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೇಳಿದ್ದಾರೆ.ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೂತ್ ಮಟ್ಟದ ಏಜೆಂಟರಿ (ಬಿಎಲ್ಎ)ಗಾಗಿ ಮಂಗಳೂರು ಓಶನ್ ಪರ್ಲ್‌ನಲ್ಲಿ ಆಯೋಜಿಸಿದ್ದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಜನಜೀವನದಲ್ಲಿ ಮಹತ್ವದ ಬದಲಾವಣೆ ತಂದಿವೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಏಜೆಂಟರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಯಾವುದೇ ಲೋಪಗಳು ಉಂಟಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.ಸುಮಾರು 250ಕ್ಕೂ ಅಧಿಕ ಬೂತ್ ಮಟ್ಟದ ಏಜೆಂಟರು ಭಾಗವಹಿಸಿದ್ದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ಪದ್ಮನಾಭ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ರೂಪೇಶ್ ರೈ, ಮಾಜಿ ಮೇಯರ್ ಶಶಿಧರ್ ಹೆಗಡೆ, ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಆಳ್ವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೆಲ್ವಿನ್ ಡಿಸೋಜಾ, ಯು.ಪಿ. ಇಬ್ರಾಹಿಂ, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ಮಮತಾ ಡಿ.ಎಸ್. ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.