ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಾದ್ಯಂತ ಜೂನ್ 28 ರಿಂದ ಜುಲೈ 1 ವರೆಗೆ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನಕ್ಕೆ ಬಾಗಲಕೋಟೆ ಶಾಸಕ ಉಮೇಶ ಮೇಟಿ ಹೇಳಿದರು. ತಿಮ್ಮಾಪೂರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಇಂದು ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಆ ಸಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಪ್ರತಿಯೊಬ್ಬರಿಗೂ ಪೊಲೀಯೋ ಲಸಿಕೆ ಹಾಕಲಾಗುತ್ತಿದ್ದು, ಈ ಕಾರ್ಯಕ್ಕೆ ಪೋಷಕರ ಸಹಕಾರ ಅಗತ್ಯವಾಗಿದೆ ಎಂದರು.0 ದಿಂದ 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು. ಹತ್ತಿರದ ಆರೋಗ್ಯ ಕೇಂದ್ರ, ಅಂಗನವಾಡಿ ಅಥವಾ ಪೊಲೀಯೋ ಬೂತ್ಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಎರಡು ಹನಿ ಪೊಲೀಯೋ ಲಸಿಕೆ ಹಾಕಿಸಬೇಕು. ಬಾಗಲಕೋಟೆ ತಾಲೂಕಿನಲ್ಲಿ 31,304 ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಲಾಗುತ್ತಿದೆ. ತಪ್ಪದೇ ಲಸಿಕೆ ಹಾಕಿಸುವ ಮೂಲಕ ದೇಶಕ್ಕೆ ಆರೋಗ್ಯವಂತ ಮಗು ನೀಡುವ ಕೆಲಸವಾಗಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್ ಮಾತನಾಡಿ, ಜಿಲ್ಲೆಯಾದ್ಯಂತ 0 ರಿಂದ 5 ವರ್ಷದೊಳಗಿನ ಒಟ್ಟು 2,10,529 ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಲು ಗುರಿ ಹೊಂದಲಾಗಿದ್ದು, ಅದಕ್ಕಾಗಿ 1,282 ಪೊಲೀಯೋ ಬೂತಗಳನ್ನು ಸ್ಥಾಪಿಸಲಾಗಿದೆ. ಒಟ್ಟು 4,07,777 ಮನೆಗಳನ್ನು ಗುರುತಿಸಿ ಭೇಟಿ ನೀಡಲು 1,390 ತಂಡಗಳನ್ನು ರಚಿಸಲಾಗಿದ್ದು, ಈ ಕಾರ್ಯಕ್ರಮದ ಮೇಲ್ವಿಚಾರಣೆಗೆ ಒಟ್ಟು 265 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ತೋಟದ ಮನೆಗಳನ್ನು ಭೇಟಿ ಮಾಡಲು 63 ಮೊಬೈಲ್ ತಂಡಗಳನ್ನು ಗುರುತಿಸಲಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ತಾಣಗಳು, ಪ್ರಸಿದ್ಧ ದೇವಾಲಯಗಳಿಗೆ ಬರುವ ಮಕ್ಕಳಿಗೆ ಲಸಿಕೆಯನ್ನು ಹಾಕಲು 45 ಟ್ರಾನ್ಸಿಸ್ಟ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಬಸವಂತಪ್ಪ ಮೇಟಿ, ಜಿಲ್ಲಾ ಆಯುಷ ಅಧಿಕಾರಿ ಡಾ.ಶೇಖರಯ್ಯ ಹಿರೇಮಠ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಜಕುಮಾರ ಯಾರಗಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾಗಿ ಸೇರಿದಂತೆ ಗ್ರಾಮದ ಮುತ್ತಪ್ಪ ಹುಗ್ಗಿ, ಮಹಾದೇವಿ ಮೇಟಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.