ಮಂಗಳೂರು: ಕೇಂದ್ರ ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಶನಿವಾರ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಭೇಟಿ ನೀಡಿ, ಬಂದರಿನ ಕಾರ್ಯಾಚರಣೆ, ಅಭಿವೃದ್ಧಿ ಯೋಜನೆಗಳು ಹಾಗೂ ಭವಿಷ್ಯದ ವಿಸ್ತರಣಾ ಕಾರ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಮಂಗಳೂರು: ಕೇಂದ್ರ ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಶನಿವಾರ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಭೇಟಿ ನೀಡಿ, ಬಂದರಿನ ಕಾರ್ಯಾಚರಣೆ, ಅಭಿವೃದ್ಧಿ ಯೋಜನೆಗಳು ಹಾಗೂ ಭವಿಷ್ಯದ ವಿಸ್ತರಣಾ ಕಾರ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ಈ ಸಂದರ್ಭ ಎನ್‌ಎಂಪಿಎ ವತಿಯಿಂದ ಒಟ್ಟು 105 ಕೋಟಿ ರು. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಎನ್‌ಎಂಪಿಎ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಹಾಗೂ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಕಾರ್ಯದರ್ಶಿ ವಿಜಯ್ ಕುಮಾರ್ ಅವರನ್ನು ಬರಮಾಡಿಕೊಂಡರು. ಬಳಿಕ ಸಿಐಎಸ್‌ಎಫ್ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.ಬಂದರಿನ ವಿವಿಧ ಟರ್ಮಿನಲ್‌ಗಳು, ಸರಕು ನಿರ್ವಹಣಾ ವ್ಯವಸ್ಥೆ, ಗೇಟ್ ಆಟೊಮೇಷನ್, ಮೂಲಸೌಕರ್ಯ ಹಾಗೂ ವಿಸ್ತರಣಾ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ನಡೆದ ಪರಿಶೀಲನಾ ಸಭೆಯಲ್ಲಿ ಬಂದರಿನ ಸರಕು ನಿರ್ವಹಣೆ, ಡಿಜಿಟಲ್ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭವಿಷ್ಯದ ವ್ಯಾಪಾರ ವೃದ್ಧಿ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ವಿಜಯ್ ಕುಮಾರ್, ಎನ್‌ಎಂಪಿಎ ಕಾರ್ಯಕ್ಷಮತೆ, ಬಂದರು ಸ್ವಯಂಚಾಲಿತ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದರು. ಕರ್ನಾಟಕದಲ್ಲಿ ಕರಾವಳಿ ಸಾಗಣೆ ಹಾಗೂ ಒಳನಾಡು ಜಲಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ಹೆಚ್ಚಿಸುವ ಕುರಿತು ವಿಶೇಷ ಗಮನ ಹರಿಸುವಂತೆ ಸೂಚಿಸಿದರು.ಗುರುಪುರ ಮತ್ತು ನೇತ್ರಾವತಿ ನದಿಗಳ ಮೂಲಕ ಸರಕು ಸಾಗಣೆಯ ಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸುವಂತೆ ನಿರ್ದೇಶನ ನೀಡಿದರು. ಜೊತೆಗೆ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಸಮುದ್ರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉಪ ಬಂದರುಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.
ಬಳಿಕ ಎಂಆರ್‌ಪಿಎಲ್, ಕಿಯೋಸಿಎಲ್, ಜೆಎಸ್‌ಡಬ್ಲ್ಯು, ಐಒಸಿಎಲ್, ಎಚ್‌ಪಿಸಿಎಲ್ ಸೇರಿದಂತೆ ಬಂದರು ಬಳಕೆದಾರರು, ಕೈಗಾರಿಕೆ, ಸ್ಟೀವ್‌ಡೋರ್ ಸಂಸ್ಥೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಕಾರ್ಯದರ್ಶಿಗಳು ವ್ಯವಹಾರ ಸುಗಮತೆ, ಕಾರ್ಯಕ್ಷಮತೆ ಹಾಗೂ ಸಹಭಾಗಿತ್ವ ವೃದ್ಧಿಗೆ ಒತ್ತು ನೀಡಿದರು.ಉದ್ಘಾಟನೆಗೊಂಡ ಯೋಜನೆಗಳು:ಸುಮಾರು 7.23 ಕೋಟಿ ರು. ವೆಚ್ಚದ ಎಂಡಿಎಲ್ ಯಾರ್ಡ್ ರಸ್ತೆ ಜಾಲ, 4.45 ಕೋಟಿ ರು. ವೆಚ್ಚದ 90 ಲಾರಿಗಳ ಸಾಮರ್ಥ್ಯದ ಟ್ರಕ್ ಪಾರ್ಕಿಂಗ್. 5.43 ಕೋಟಿ ರು. ವೆಚ್ಚದ ಬೈಕಂಪಾಡಿ ಟ್ರಕ್ ಟರ್ಮಿನಲ್, 5.47 ಕೋಟಿ ರು. ವೆಚ್ಚದ ರಾಷ್ಟ್ರೀಯ ಹೆದ್ದಾರಿ-66 ರಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶ ಸಂಪರ್ಕಿಸುವ ಪಿಕ್ಯೂಸಿ ರಸ್ತೆ.
ಶಂಕುಸ್ಥಾಪನೆಗೊಂಡ ಯೋಜನೆಗಳು: 8.65 ಕೋಟಿ ರು. ವೆಚ್ಚದ ಆಮದು ಸರಕು ಸಂಗ್ರಹಣಾ ಶೆಡ್, 5.67 ಕೋಟಿ ರು. ವೆಚ್ಚದ ಪಣಂಬೂರು ಬೀಚ್ ರಸ್ತೆ ಸುಂದರೀಕರಣ ಯೋಜನೆ.ಹೊಸ ಉಪಕ್ರಮಗಳು: 56.23 ಕೋಟಿ ರು. ವೆಚ್ಚದ ಪಣಂಬೂರು ರೈಲು ಯಾರ್ಡ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಯೋಜನೆಗೆ ಐಪಿಆರ್‌ಸಿಎಲ್‌ನೊಂದಿಗೆ ಒಪ್ಪಂದ, 12 ಕೋಟಿ ರು. ವೆಚ್ಚದ ಅಮೃತ್ ಫಾರ್ಮಸಿ ಸೇವೆ ಆರಂಭ, ಕಸ್ಟಮ್ಸ್ ಪ್ರದೇಶದಲ್ಲಿ ಸಿಬ್ಬಂದಿ ಮತ್ತು ವಾಹನಗಳ ಪರಿಶೀಲನೆಗೆ ಮೊಬೈಲ್ ಆ್ಯಪ್ ಬಿಡುಗಡೆ, ವಿಶೇಷ ಚೇತನ ಉದ್ಯೋಗಿಗೆ ಎಲೆಕ್ಟ್ರಿಕ್ ವೀಲ್‌ಚೇರ್ ವಿತರಣೆ.