ಕನ್ನಡಪ್ರಭ ವಾರ್ತೆ ಕಾರವಾರ
ಜ.14 ರಂದು ಕಾರವಾರದ ನೌಕಾನೆಲೆಯಲ್ಲಿ ಬಾರ್ಡರ್ 2 ಚಲನಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಭಾರತೀಯ ನೌಕಾಪಡೆಗೆ ಗೌರವ ಸಲ್ಲಿಸುವ ನೆಪದಲ್ಲಿ ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಸಾಮಾನ್ಯವಾಗಿ ನೌಕಾನೆಲೆಯು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವಲಯವಾಗಿದ್ದು, ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾಧ್ಯಮದವರು ಪ್ರವೇಶಿಸಬೇಕಾದರೂ ಹಲವು ಹಂತದ ಪರಿಶೀಲನೆ ಮತ್ತು ಕಠಿಣ ಅನುಮತಿ ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಚಲನಚಿತ್ರ ಪ್ರಚಾರದಂತಹ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು ಹೇಗೆ ಎಂಬುದು ಸಾರ್ವಜನಿಕ ವಲಯದಲ್ಲಿ ಸಂಶಯ ಹುಟ್ಟುಹಾಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಮ್ಮ ರಕ್ಷಣಾ ಪಡೆಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ಪ್ರಚಾರದ ಚಟುವಟಿಕೆಗಳಿಗಾಗಿ ಭದ್ರತಾ ಶಿಷ್ಟಾಚಾರ ಸಡಿಲಿಸಬಾರದು. ಇಂತಹ ಅನುಮತಿಗಳು ಮುಂದೊಂದು ದಿನ ಅಪಾಯಕಾರಿ ಘಟನೆಗಳಿಗೆ ಕಾರಣವಾಗಬಹುದು. ದೇಶ ವಿರೋಧಿ ಶಕ್ತಿಗಳು ಅಥವಾ ಭಯೋತ್ಪಾದಕರು ಇದೇ ಮಾರ್ಗವನ್ನು ಬಳಸಿಕೊಂಡು, ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಸಿನಿಮಾ ಪ್ರಚಾರದ ನೆಪದಲ್ಲಿ ರಕ್ಷಣಾ ನೆಲೆಗಳನ್ನು ಪ್ರವೇಶಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಆತಂಕವಾಗಬಹುದು ಎಂದು ಮಾಧವ ನಾಯಕ ಎಚ್ಚರಿಸಿದ್ದಾರೆ.ಈ ಹಿನ್ನೆಲೆ ಯಾವ ವಿಶೇಷ ನಿಯಮಗಳ ಅಡಿಯಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಯಿತು? ಪಾಲ್ಗೊಂಡವರ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆಯೇ? ಕಾರ್ಯಕ್ರಮದ ವೇಳೆ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ನೀಡಲಾಗಿದೆಯೇ ಅಥವಾ ಚಿತ್ರೀಕರಣ ಮಾಡಲಾಗಿದೆಯೇ? ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆಗಳಿಗೆ ಜಿಲ್ಲಾಡಳಿತ ಹಾಗೂ ರಕ್ಷಣಾ ಇಲಾಖೆ ಉತ್ತರ ನೀಡಬೇಕು ಎಂದು ಜನಶಕ್ತಿ ವೇದಿಕೆ ಒತ್ತಾಯಿಸಿದೆ. ದೇಶದ ಭದ್ರತಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಈ ವಿಷಯದಲ್ಲಿ ಪಾರದರ್ಶಕತೆ ಅಗತ್ಯ ಎಂದು ಮನವಿ ಮಾಡಿದ್ದಾರೆ.