ಬಸವನಬಾಗೇವಾಡಿ : 14 ಬಾರಿ ಕೊರೆಸಿದ್ರೂ ಫೇಲ್‌ ಆಗಿದ್ದ ಬೋರ್‌ವೆಲ್‌ಗೆ ಸಿಕ್ತು ದೇವರ ವರ!

KannadaprabhaNewsNetwork | Updated : Feb 11 2025, 01:18 PM IST

ಸಾರಾಂಶ

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತೋಟದ ನಿವಾಸಿ ರೈತ ಮುತ್ತು ಸಿದ್ಲಿಂಗಪ್ಪ ಬಿರಾದಾರ ತೋಟದಲ್ಲಿ ನಡೆದ ವಿಸ್ಮಯವು ಸುತ್ತಮುತ್ತಲಿನ ಜನರನ್ನು ಬೆರಗುಗೊಳಿಸಿದ ಘಟನೆ

  ಬಸವನಬಾಗೇವಾಡಿ : ರೈತನೊಬ್ಬ ತನ್ನ ನಾಲ್ಕು ಎಕರೆ ತೋಟದಲ್ಲಿ ೧೪ ಸಲ ಬೋರವೆಲ್ ಕೊರೆಸಿ ನೀರು ಬಾರದೇ ಸಾಲ ಹೆಚ್ಚಾಗಿ ಇನ್ನೇನು ಜೀವನವೇ ಸಾಕೆಂದು ಆತ್ಮಹತ್ಯೆಗೆ ನಿರ್ಧರಿಸಿದಾತನಿಗೆ ಗಂಗೆ ವಿಸ್ಮಯದಂತೆ ಬಾಯಿಬಿಟ್ಟಿದ್ದಾಳೆ. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತೋಟದ ನಿವಾಸಿ ರೈತ ಮುತ್ತು ಸಿದ್ಲಿಂಗಪ್ಪ ಬಿರಾದಾರ ತೋಟದಲ್ಲಿ ನಡೆದ ವಿಸ್ಮಯವು ಸುತ್ತಮುತ್ತಲಿನ ಜನರನ್ನು ಬೆರಗುಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಏನಿದು ವಿಸ್ಮಯ?:

41 ವಯಸ್ಸಿನ ಮುತ್ತು ಬಿರಾದಾರ ತಮ್ಮ ನಾಲ್ಕು ಎಕರೆ ತೋಟದಲ್ಲಿ 14 ಸಲ ಬೋರ್‌ವೆಲ್ ಕೊರೆಸಿ, ನೀರು ಬಾರದೇ ವಿಫಲರಾಗಿದ್ದರು. 14 ಸಲ ಬೋರ್‌ವೆಲ್ ಹಾಕಿಸಲು ಮಾಡಿದ ₹36 ಲಕ್ಷ ಸಾಲವನ್ನು ತಮ್ಮ ಎರಡು ಎಕರೆ ಮಾರಾಟ ತೀರಿಸಿದ್ದರು. 14 ಸಲ ಬೋರ್‌ವೆಲ್ ಹಾಕಿ ವಿಫಲರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಮತ್ತೆ ಸೋಮವಾರ ಜಿಯೋಲಾಜಿಸ್ಟರನ್ನು ತೋಟಕ್ಕೆ ಕರೆಸಿ ನೀರಿನ ಪಾಯಿಂಟ್ ಗುರುತಿಸಿ ಬೋರವೆಲ್ ಹಾಕಿದರೂ ನೀರು ಬಾರದೇ ಅದು ಸಹ ವಿಫಲವಾಗಿದೆ. ದೇವರನ್ನು ನೆನೆದರೂ ನೀರು ಬೀಳದೆ ಇರುವುದನ್ನು ಕಂಡ ಇವರು ತಮಗೆ ಜೀವನವೇ ಸಾಕೆಂದು ಆತ್ಮಹತ್ಯೆಗೆ ಮೊರೆ ಹೋಗಬೇಕೆಂದು ನಿರ್ಧಾರ ಮಾಡಿದ್ದರು.

ಇದಕ್ಕೂ ಮೊದಲು ಅವರು ತಮ್ಮ ಮನಸ್ಸಿನಲ್ಲಿ ಬಸವನಬಾಗೇವಾಡಿ ಕೊರೆಮ್ಮತಾಯಿಯನ್ನು ಭಕ್ತಿಯಿಂದ ನೆನೆದು ತಮ್ಮ ಎಡಗಾಲಿನ ಚಪ್ಪಲಿ ಬೀಸಿ ಒಗೆದರು. ಅದು ಎಲ್ಲಿ ಹೋಗಿ ಬೀಳುತ್ತದೆಯೋ ಅಲ್ಲಿಯೇ ಕೊನೆಯ ಬಾರಿಗೆ ಬೋರ್‌ವೆಲ್ ಪಾಯಿಂಟ್ ಇದೆ ಅಂದುಕೊಳ್ಳುವೆ ಎಂದುಕೊಂಡಿದ್ದಾರೆ. ಅದು ಹೋಗಿ ಬಿದ್ದ ಸ್ಥಳದಲ್ಲಿಯೇ ಬೋರ್‌ವೆಲ್ ಹಾಕಿದಾಗ ೪೮೦ ಅಡಿಗೆ 3 ಇಂಚು ಸಿಹಿನೀರು ಬಿದ್ದಿದೆ. ಕೊರೆಮ್ಮದೇವಿ ಆಶೀರ್ವಾದ ಫಲವಾಗಿ ಗಂಗಾಮಾತೆ ರೈತನ ಕೈ ಹಿಡಿದಿದ್ದು ಇದೊಂದು ವಿಸ್ಮಯ ಘಟನೆ ಎಂದು ಸುತ್ತಮುತ್ತಲಿನ ನಿವಾಸಿಗಳಾದ ಮಲ್ಲಪ್ಪ ಗಣಿ, ಬಸಪ್ಪ ಗಣಿ, ಸಂಗಪ್ಪ ಬಿರಾದರ, ಪ್ರವೀಣ ಪೊಲೀಸ್‌ಪಾಟೀಲ, ಶಂಕರಗೌಡ, ವಿಶ್ವನಾಥ, ಹಣಮಂತ್ರಾಯ, ಶ್ರೀಶೈಲ ಗಣಿ ಆಡಿಕೊಂಡಿದ್ದಾರೆ.

Share this article