ಭೀಕರ ಬರಕ್ಕೆ ಬರಿದಾದ ಕೊಳವೆಬಾವಿಗಳು!

KannadaprabhaNewsNetwork |  
Published : Sep 06, 2026, 03:00 AM IST
ಪೋಟೋ ಇವೆ. | Kannada Prabha

ಸಾರಾಂಶ

ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ, ಹಳ್ಳ-ಕೊಳ್ಳಗಳೆಲ್ಲವೂ ಬತ್ತಿಹೋಗಿದ್ದು, ಪರಿಣಾಮ ಅಂತರ್ಜಲ ತೀವ್ರ ಕುಸಿತವಾಗಿದೆ. ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಉಳಿಸಿಕೊಳ್ಳಲು ರೈತರು ಜಲ ಜಪ ಮಾಡುವಂತಾಗಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ, ಹಳ್ಳ-ಕೊಳ್ಳಗಳೆಲ್ಲವೂ ಬತ್ತಿಹೋಗಿದ್ದು, ಪರಿಣಾಮ ಅಂತರ್ಜಲ ತೀವ್ರ ಕುಸಿತವಾಗಿದೆ. ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಉಳಿಸಿಕೊಳ್ಳಲು ರೈತರು ಜಲ ಜಪ ಮಾಡುವಂತಾಗಿದೆ.

ಧಾರವಾಡ, ಗದಗ, ವಿಜಯನಗರ, ಬಾಗಲಕೋಟೆ ಹೀಗೆ ವಿವಿಧೆಡೆ ಕೊಳವೆಬಾವಿ ಸಹಾಯದಿಂದ ನೀರಾವರಿ ಮಾಡಿ ಬದುಕು ಕಟ್ಟಿಕೊಂಡಿದ್ದ ಲಕ್ಷಾಂತರ ರೈತರಿಗೆ ಈ ಬಾರಿ ಮುಂಗಾರು ಬಿತ್ತನೆಯಾಗಿ ಇನ್ನೇನು ಬೆಳೆಗಳಿಗೆ ನೀರು ಬೇಕು ಎನ್ನುವಷ್ಟರಲ್ಲಿ ಮಳೆ ಅಭಾವದಿಂದಾಗಿ ನೀರು ಕಡಿಮೆಯಾಗಿದೆ. ಕೊಳವೆಬಾವಿ ನೀರನ್ನೇ ನಂಬಿ ಹತ್ತಾರು ಎಕರೆ ಬಿತ್ತನೆ ಮಾಡಿದ್ದ ರೈತರು ನೀರಿಲ್ಲದೇ ಒಣಗಿ ಹೋಗುತ್ತಿರುವ ಬೆಳೆ ಕಂಡು ತೀವ್ರ ಆತಂಕಕ್ಕೀಡಾಗಿದ್ದಾರೆ.

ಕೊಳವೆಬಾವಿ ನೀರಾವರಿ ಮಾಡಿಕೊಂಡವರು ತೋಟಗಾರಿಕೆ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಹೆಸರುಕಾಳು, ಹತ್ತಿ, ಹೂವು, ಕಾಯಿಪಲ್ಲೆ ಹೀಗೆ ತರಹೇವಾರಿ ಬೆಳೆ ಬೆಳೆಯುತ್ತಾರೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಭಾಗದಲ್ಲಿ ಈರುಳ್ಳಿ ಬೆಳೆಯುತ್ತಾರೆ. ಅಂತರ್ಜಲ ತೀವ್ರ ಕುಸಿತದಿಂದ ದಿನದಿಂದ ದಿನಕ್ಕೆ ಕೊಳವೆಬಾವಿಯಲ್ಲಿ ಜಲ ಮಾಯವಾಗುತ್ತಿದ್ದು, ಹೂವಿನಹಡಗಲಿ ತಾಲೂಕಿನ ಕೆಂಚಮ್ಮನಹಳ್ಳಿ, ಉತ್ತಂಗಿ, ಇಟಗಿ, ಕನ್ನೆಹಳ್ಳಿ ಭಾಗದ ರೈತರು ಟ್ಯಾಂಕರ್ ಮೂಲಕ ನೀರು ಖರೀದಿಸಿ ಎರಡ್ಮೂರು ಎಕರೆಗೆ ಮಾತ್ರ ಹಾಯಿಸುತ್ತಿದ್ದಾರೆ. ಒಬ್ಬೊಬ್ಬ ರೈತನ ಹತ್ತಾರು ಎಕರೆ ಈರುಳ್ಳಿ ಬೆಳೆ ನೀರಿನ ಅಭಾವದಿಂದ ಒಣಗಿಹೋಗಿದೆ.

ಇಲ್ಲಿಯ ಕೊಳವೆಬಾವಿಗಳಲ್ಲಿ ಈಗ ನೀರೆ ಇಲ್ಲ. 300ರಿಂದ 400 ಅಡಿವರೆಗೂ ಕೊಳವೆಬಾವಿ ಕೊರೆದಿದ್ದೇವೆ. ನೀರಾವರಿಯಲ್ಲಿ ಎಕರೆಗೆ 100 ಕ್ವಿಂಟಲ್‌ ಈರುಳ್ಳಿ ಬೆಳೆದಿದ್ದೇವೆ. ಈಗ 25ರಿಂದ 30 ಕ್ವಿಂಟಲ್‌ ಈರುಳ್ಳಿ ಬರುವುದು ಕಷ್ಟವಿದೆ. 10ರಿಂದ 15 ಹೆಕ್ಟೇರ್‌ ನೀರಾವರಿಯಲ್ಲಿ ಈರುಳ್ಳಿ ಬೆಳೆಯಲಾಗಿದೆ. ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಾಗದೇ 10ರಿಂದ 11 ಸಾವಿರ ಎಕರೆ ಈರುಳ್ಳಿ ಒಣಗಿ ಹೋಗಿದೆ. ಸದ್ಯ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದು, ಟ್ಯಾಂಕರ್‌ವೊಂದರಲ್ಲಿ ತರುವ 2 ಸಾವಿರ ಲೀಟರ್‌ ನೀರು 2 ಮಡಿಗೆ ಮಾತ್ರ ಆಗುತ್ತಿದೆ. ದಿನಕ್ಕೆ ಮೂರ್ನಾಲ್ಕು ಟ್ಯಾಂಕರ್‌ ಮಾತ್ರ ಪೂರೈಕೆ ಮಾಡುತ್ತಿದ್ದೇವೆ. ಹೆಕ್ಟೇರ್‌ಗೆ 70ರಿಂದ 80 ಸಾವಿರ ರು. ಖರ್ಚು ಮಾಡಿದ್ದು, ರೈತರ ಸಾಲ ಮನ್ನಾ ಮಾಡಬೇಕು, ಎಕರೆಗೆ 30 ಸಾವಿರ ರು. ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷರಾದ ಎನ್.ಎಂ. ಸಿದ್ದೇಶ್ ಉತ್ತಂಗಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಕೆ. ರಾಮನಗೌಡ್ರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ವಸಂತ್ ಕುಮಾರ್, ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ. ಮಂಜುನಾಥ ಇನ್ನೂ ಅನೇಕ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಗದಗ, ಧಾರವಾಡ ಜಿಲ್ಲೆಯಲ್ಲೂ ಕೊಳವೆಬಾವಿ ನೀರಾವರಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಅಭಾವದಿಂದಾಗಿ ಸ್ಪ್ರಿಂಕ್ಲರ್‌ಗಳಲ್ಲಿ ನೀರು ಕಡಿಮೆ ಬರುತ್ತಿದೆ. ಒಂದು ಕೊಳವೆಬಾವಿಗೆ 12 ಸ್ಪ್ರಿಂಕ್ಲರ್‌ ಹಚ್ಚುತ್ತಿದ್ದೇವು. ಈಗ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣವೇ ಕಡಿಮೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುವಾಗ ಅಂತರ್ಜಲ ಹೆಚ್ಚಿ ಭರ್ತಿಯಾಗಿ ಹೊಲಗಳಿಗೆ ನೀರು ಹಾಯಿಸಿದ್ದಾರೆ. ಈಗ ಒಂದೊಂದು ಕೊಳವೆಬಾವಿಗೆ 4 ಎಕರೆಗೂ ಸಹ ನೀರು ಪೂರೈಸಲು ಆಗುತ್ತಿಲ್ಲ ಎನ್ನುತ್ತಾರೆ ರೈತರು.

ಅಣ್ಣಿಗೇರಿ ತಾಲೂಕಿನ ಸೈದಾಪುರದ ಹಾಲಮನಿ ಎಂಬ ರೈತರೊಬ್ಬರ ಹೊಲದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊರೆಸಿದ ಕೊಳವೆಬಾವಿ ಬತ್ತಿ ಹೋಗಿದೆ. ಏಳರಿಂದ 10 ಎಕರೆಗೆ ನೀರು ಹಾಯಿಸುತ್ತಿದ್ದ ಹೊಲದ ಮಾಲೀಕರಿಗೆ ಕೊಳವೆಬಾವಿ ನೀರು ಖಾಲಿಯಾಗಿರುವುದು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಇದು ಒಬ್ಬ ರೈತರ ಕಥೆಯಲ್ಲ. ಇಂಥ ಹತ್ತಾರು ಕೊಳವೆಬಾವಿಗಳ ಬತ್ತಿ ಹೋಗಿವೆ. ಮುಂಗಾರಿ ಬಿತ್ತನೆ ಬಳಿಕ ಮಳೆ ಬಾರದೇ ಮಧ್ಯದಲ್ಲಿ ಅಂತರ್ಜಲ ಕುಸಿತವಾಗಿರುವುದು ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನಮ್ಮ 20 ಎಕರೆ ಹೊಲದಲ್ಲಿ ಮೂರು ಕೊಳವೆಬಾವಿಗಳಿದ್ದು, ಮಳೆ ಅ‍ಭಾವದಿಂದ ಈ ಬಾರಿ ಕೊಳವೆಬಾವಿಗಳಲ್ಲಿ ಅಂತರ್ಜಲ ತೀವ್ರ ಕುಸಿತವಾಗಿದೆ. ಸ್ಪ್ರಿಂಕ್ಲರ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದ್ದು, 10 ಎಕರೆಗೂ ನೀರು ಪೂರೈಸಲು ಆಗುತ್ತಿಲ್ಲ. ನೀರಿನ ಅಭಾವದಿಂದ ಸರಿಯಾಗಿ ಹೆಸರು ಬೆಳೆ ಬಂದಿಲ್ಲ. ಈಗ ಮೆಣಸಿನಕಾಯಿ, ಶೇಂಗಾ ಬೆಳೆಗೂ ಸಹ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ.

ರಾಘುವೇಂದ್ರರಡ್ಡಿ ಹನುಮರಡ್ಡಿ ಚಾಕಲಬ್ಬಿ, ರೈತ

ಈರುಳ್ಳಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಆದರೆ, ಮಳೆ ಆಶ್ರಿತ ಈರುಳ್ಳಿ ಮಳೆ ಇಲ್ಲದೇ ಒಣಗಿ ಹೋಯಿತು. ಈಗ ಅಂತರ್ಜಲ ಕುಸಿತದಿಂದ ನೀರಾವರಿ ಈರುಳ್ಳಿ ಹೊಲಕ್ಕೂ ಸರಿಯಾಗಿ ನೀರು ಪೂರೈಸಲಾಗದೇ ರೈತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ.

ಎನ್‌.ಎಂ. ಸಿದ್ದೇಶ ಉತ್ತಂಗಿ, ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶಿಸ್ತು, ಬದ್ಧತೆಯಿಂದಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ: ಡಾ.ರವೀಶ್‌ ತುಂಗಾ
ಅತ್ತಾವರ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ