ಕನ್ನಡನಾಡಲ್ಲಿ ಜನಿಸಿದ ನಾವೇ ಪುಣ್ಯವಂತರು: ಶಾಸಕ ಎಚ್.ವಿ.ವೆಂಕಟೇಶ್ ಅಭಿಪ್ರಾಯ

KannadaprabhaNewsNetwork | Published : Nov 2, 2024 1:19 AM

ಸಾರಾಂಶ

ಕರ್ನಾಟಕ ಅತ್ಯಂತ ಸುಂದರ ಮತ್ತು ರಮಣೀಯ ಪ್ರದೇಶವಾಗಿದೆ. ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ರಾಜ ಮಹಾರಾಜರು, ಹಿರಿಯ ಚಲನಚಿತ್ರ ನಟರು ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಖ್ಯಾತ ಕವಿಗಳು ಜನಿಸಿದ್ದ ನಾಡಲ್ಲಿ ಜನಿಸಿದ ನಾವು ಅತ್ಯಂತ ಪುಣ್ಯವಂತರು .

ಕನ್ನಡಪ್ರಭ ವಾರ್ತೆ ಪಾವಗಡ

ಕನ್ನಡ ಭಾಷೆ, ನೆಲ, ಜಲ ಹಾಗೂ ಪ್ರಕೃತಿಯ ಸೌಂದರ್ಯ ವೀಕ್ಷಿಸುವುದೇ ಒಂದು ಖುಷಿ, ನಾವು ಕನ್ನಡಿಗರೆಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಸಂತಸ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ರಾಜ್ಯದ ಪ್ರಕೃತಿ ಸೊಬಗು ನೋಡುವುದೇ ಒಂದು ಸಂಭ್ರಮ. ಕರ್ನಾಟಕ ಅತ್ಯಂತ ಸುಂದರ ಮತ್ತು ರಮಣೀಯ ಪ್ರದೇಶವಾಗಿದೆ. ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ರಾಜ ಮಹಾರಾಜರು, ಹಿರಿಯ ಚಲನಚಿತ್ರ ನಟರು ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಖ್ಯಾತ ಕವಿಗಳು ಜನಿಸಿದ್ದ ನಾಡಲ್ಲಿ ಜನಿಸಿದ ನಾವು ಅತ್ಯಂತ ಪುಣ್ಯವಂತರು ಎಂದರು.

ನಮ್ಮ ರಾಜ್ಯದಲ್ಲಿ ದೊಡ್ಡ ದೊಡ್ಡ ಕಂಪನಿಗಳಿವೆ. ಇಂತಹ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ಯ ನೀಡಬೇಕು. ಈ ಬಗ್ಗೆ ಸರ್ಕಾರದ ಜತೆ ಚರ್ಚಿಸುವುದಾಗಿ ಹೇಳಿದರು.

ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರದಲ್ಲಿ ನಿರತವಾಗಿದ್ದು, ಗ್ಯಾರಂಟಿಗಳು ನಿಲ್ಲಲ್ಲ ಎಂದು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ವಿಪಕ್ಷದವರ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವತ್ತ ನಮ್ಮೆಲ್ಲರ ಪ್ರಯತ್ನವಿರಬೇಕು. ನಮ್ಮ ಮೊದಲ ಆದ್ಯತೆ ಕನ್ನಡಕ್ಕೆ ಎಂದ ಅವರು, ನಾನು ಭಾಷಣಕಾರನಲ್ಲ, ಕೆಲಸಗಾರ. ಪುರಸಭೆಯ ಇತಿಮಿತಿಯಲ್ಲಿ ಸಾರ್ವಜನಿಕರ ಕೆಲಸಕ್ಕೆ ಸದಾ ಬದ್ಧರಿರುವುದಾಗಿ ಹೇಳಿ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು.

ಉಪನ್ಯಾಸಕ ಎಚ್‌.ಕೆ.ನರಸಿಂಹಮೂರ್ತಿ ಮಾತನಾಡಿ, ಕನ್ನಡ ನಾಡಿನ ಐತಿಹಾಸಿಕ ಚರಿತ್ರೆಯ ಕುರಿತು ಸಮಗ್ರವಾಗಿ ವಿವರಿಸಿದರು.

ಪತ್ರಿಕಾರಂಗದಿಂದ ಸಂತೋಷ್‌ಕುಮಾರ್‌, ರಾಮಕೃಷ್ಣನಾಯಕ್‌, ಮೀನಗುಂಟೆನಹಳ್ಳಿ ಎಂ.ಕೆ.ನರಸಿಂಹಪ್ಪ, ಕ್ರೀಡಾಕ್ಷೇತ್ರದಿಂದ ನಂದೀಶ್‌ನಾಯ್ಕ್‌ ಹಾಗೂ ಪಾಳೇಗಾರ ಲೋಕೇಶ್‌, ಸಮಾಜ ಸೇವೆಯಿಂದ ಷಾ ಬಾಬು (ಷರೀಫ್‌) ಡಿಎಸ್‌ಎಸ್‌ ಜಿಲ್ಲಾ ಸಂಘಟನೆ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ,ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್‌, ಜಾನಪದ ಕ್ಷೇತ್ರದಿಂದ ವೀರ್ಲಗೊಂದಿಯ ಹನುಮಕ್ಕ ಸೇರಿದಂತೆ ತಾಲೂಕಿನ 30 ಜನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಸಾಧಕರಿಗೆ ಹಾಗೂ ಕನ್ನಡ ಭಾಷೆಯಲ್ಲಿ ಅತೀಹೆಚ್ಚು ಅಂಕ ಗಳಿಸಿದ ತಾಲೂಕಿನ ಕೋಡಿಗೇನಹಳ್ಳಿಯ ಬಿಸಿಎಂ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.

ತಹಸೀಲ್ದಾರ್‌ ಡಿ.ಎನ್‌.ವರದರಾಜ್‌, ಜಿಪಂ ಎಇಇ ಸುರೇಶ್‌, ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್‌ ಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಪ್‌, ಬಿಇಒ ಇಂದ್ರಣಮ್ಮ, ತಾಲೂಕು ಕಸಾಪ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಸುದೇಶ್‌ಬಾಬು, ಎ.ಶಂಕರರೆಡ್ಡಿ, ಪುರಸಭೆ ಉಪಾಧ್ಯಕ್ಷ ಗೀತಾ ಹನುಮಂತರಾಯಪ್ಪ, ಪುರಸಭೆ ಸದಸ್ಯರಾದ ತೆಂಗಿನಕಾಯಿ ರವಿ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ತಾಲೂಕು ಅಧ್ಯಕ್ಷ ನರಸಿಂಹರೆಡ್ಡಿ, ವಸತಿ ಶಾಲೆಯ ಪ್ರಾಂಶುಪಾಲ ತಿಪ್ಪೇಸ್ವಾಮಿ, ಸಂಘ- ಸಂಸ್ಥೆಗಳ ಪ್ರತಿನಿಧಿ ಆರ್‌.ಟಿ.ಖಾನ್‌, ಹೋಬಳಿ ಕಸಾಪ ಕಾರ್ಯದರ್ಶಿ ನಾರಾಯಣಪ್ಪ ಹಾಗೂ ವಿವಿಧ ಕನ್ನಡ ಹಾಗೂ ದಲಿತಪರ ಸಂಘಟನೆಯ ಮುಖಂಡರು, ಶಾಲಾ ಕಾಲೇಜುಗಳ ಪ್ರಾಂಶುಪಾಲ ಹಾಗೂ ಶಿಕ್ಷಕರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.

Share this article