-ಈ ಬಾರಿ ರಾಜಧಾನೀಲಿ 43% ಮುಂಗಾರು ಮಳೆ ಕೊರತೆ । ನೀರಿಲ್ಲದೇ ಬತ್ತಿ ಹೋಗಿರುವ ಕೆರೆಗಳು । ಟ್ಯಾಂಕರ್ ನೀರು ಹೆಚ್ಚಳ ಸಾಧ್ಯತೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉದ್ಯಾನ ನಗರಿಗೆ ಒಟ್ಟಾರೆ ಶೇ.43ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮ ಮಳೆ ನೀರಿನಿಂದಲೇ ತುಂಬುವ ನಗರದ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿ ಮಳೆಗಾಲಕ್ಕೆ ಮೊದಲೇ ಅಂತರ್ಜಲ ಬತ್ತುವ ಭೀತಿ ಎದುರಾಗಿದೆ.
ಮಳೆಗಾಲದ ಜೂ.1ರಿಂದ ಸೆ.30ರವರೆಗೆ ನಗರದಲ್ಲಿ ಸರಾಸರಿ 549 ಮಿ.ಮೀ ಮಳೆಯಾಗಬೇಕು. ಈ ಬಾರಿ ಶೇ.43ರಷ್ಟು ಕೊರತೆಯಾಗಿ ಬರೀ 313 ಮಿ.ಮೀ ಮಳೆಯಾಗಿದ್ದು, 236 ಮಿ.ಮೀ ಮಳೆ ಕೊರತೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.ಮಳೆಗಾಲ ಆರಂಭದ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ನಗರಕ್ಕೆ ಕಡಿಮೆ ಮಳೆ ಬಿದ್ದಿದೆ. ಅದರಲ್ಲೂ ಜುಲೈನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ. ಸೆಪ್ಟಂಬರ್ ಕೊನೆಯಲ್ಲಿ ಸುರಿದ ಉತ್ತಮ ಮಳೆಯಿಂದ ನಗರದ ಜಲ ಮೂಲಗಳಿಗೆ ಸ್ವಲ್ಪ ಕಳೆ ಬಂದಿದೆ.
ನೀರಿನ ಅಭಾವ ಭೀತಿ: ಕೆರೆಗಳಲ್ಲಿ ನೀರಿಲ್ಲದೇ ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತುವ ಆತಂಕ ಎದುರಾಗಿದೆ. ಇದರಿಂದ ನಗರದಾದ್ಯಂತ ಬೋರ್‌ವೆಲ್ ನೀರು ನಂಬಿಕೊಂಡಿರುವ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಕಚೇರಿಗಳಿಗೆ ನೀರಿನ ಕೊರತೆಯ ಭೀತಿ ಎದುರಾಗಿದೆ.
ಹಿಂಗಾರು ಕೂಡ ಕೊರತೆ: ರಾಜ್ಯಕ್ಕೆ ಹಿಂಗಾರು ಕೂಡ ಶೇ.30ರಷ್ಟು ಕೊರತೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಫೋಟೋ ಕ್ಯಾಪ್ಷನ್