ಮೈಸೂರು ರಸ್ತೆಯಲ್ಲೊಂದು ಬಾಟಲ್‌ ನೆಕ್‌!

KannadaprabhaNewsNetwork |  
Published : Oct 05, 2026, 03:45 AM IST
25 | Kannada Prabha

ಸಾರಾಂಶ

ಬೆಂಗಳೂರು ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿದರೂ ಬೆಂಗಳೂರು ವಿಶ್ವವಿದ್ಯಾಲಯ ಗೇಟ್ ಸಮೀಪ ಮೈಸೂರು ರಸ್ತೆಯಲ್ಲಿರುವ ಪುರಾತನ ಸೇತುವೆ ಅಗಲೀಕರಣ ಮಾಡದೆ ನಿರ್ಲಕ್ಷಿಸಿದ್ದು, ಇಂದಿಗೂ ಈ ಸೇತುವೆಯಲ್ಲಿ ವಾಹನ ಸಂಚಾರರು ಜನದಟ್ಟಣೆ ಸಮಯ ಪರದಾಡುವಂತಾಗಿದೆ.

ನಗರದ ಅಭಿವೃದ್ಧಿಗೆ ವಿಶ್ವಬ್ಯಾಂಕ್ ₹ 2000 ಕೋಟಿ ನೀಡಿದ್ರೂ ಅಗಲೀಕರಣವಾಗದ ಮೈಸೂರು ರಸ್ತೆ ಸೇತುವೆ

-ಬೆಂವಿವಿ ಗೇಟ್‌ ಸಮೀಪವಿರುವ ಸುಮಾರು 70 ವರ್ಷದ ಹಳೆಯ ಸೇತುವೆ । ಸೇತುವೆ ಅಗಲೀಕರಣ ಮಾಡಲು ಸರ್ಕಾರ ನಿರ್ಲಕ್ಷ್ಯ

-ಜನದಟ್ಟಣೆ ವೇಳೆ ವಾಹನ ಸವಾರರಿಗೆ ಕಿರಿಕಿರಿ । ಸಿಎಂ, ಅನೇಕ ಮಂತ್ರಿಗಳು ಇದೇ ರಸ್ತೇಲಿ ಸಂಚರಿಸಿದ್ರೂ ಕಾಮಗಾರಿ ಮಾಡ್ತಿಲ್ಲ

---ಉಮಾಶಂಕರ ಕಾರ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿದರೂ ಬೆಂಗಳೂರು ವಿಶ್ವವಿದ್ಯಾಲಯ ಗೇಟ್ ಸಮೀಪ ಮೈಸೂರು ರಸ್ತೆಯಲ್ಲಿರುವ ಪುರಾತನ ಸೇತುವೆ ಅಗಲೀಕರಣ ಮಾಡದೆ ನಿರ್ಲಕ್ಷಿಸಿದ್ದು, ಇಂದಿಗೂ ಈ ಸೇತುವೆಯಲ್ಲಿ ವಾಹನ ಸಂಚಾರರು ಜನದಟ್ಟಣೆ ಸಮಯ ಪರದಾಡುವಂತಾಗಿದೆ.

ಈ ಸೇತುವೆ ಅಗಲೀಕರಣವಾದರೆ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳ ಕಾಂಪೌಂಡ್‌ಗೆ ಹೆದ್ದಾರಿ ರಸ್ತೆ ಬಂದು ನಿಲ್ಲುವುದರಿಂದ ಯಾವ ಸರ್ಕಾರಗಳೂ ಈ ಸೇತುವೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ಬೆಂಗಳೂರು-ಮೈಸೂರು ರಸ್ತೆಗೆ ಬರುತ್ತಿದ್ದಂತೆ ಎಡತಿರುವು ಪಡೆಯಬೇಕು. ಬೆಂಗಳೂರು ವಿವಿಯಿಂದ ಬರುವ ಕೊಳಚೆ ನೀರು ಇದೇ ಸೇತುವೆ ಕೆಳಗೆ ಹರಿಯುತ್ತಿದೆ. ವಿಪರ್ಯಾಸವೆಂದರೆ, ನಗರದ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್‌ನಿಂದ ಈ ಭಾಗಕ್ಕೆ 2000 ಕೋಟಿ ರು.ವೆಚ್ಚ ಮಾಡುತ್ತಿದ್ದರೂ ಈ ಕಾಮಗಾರಿಯ ಪಟ್ಟಿಯಲ್ಲಿ ಈ ಸೇತುವೆ ಅಗಲೀಕರಣವಾಗಲಿ, ಪುನರ್ ನಿರ್ಮಾಣ ಕಾಮಗಾರಿಯಾಗಿಯೇ ಗಣನೆಗೇ ಬಂದಿಲ್ಲ. ಈ ಸೇತುವೆ ಪಕ್ಕದಲ್ಲಿಯೇ ಮೆಟ್ರೋ ಪಿಲ್ಲರ್ ಹಾಕಲಾಗಿದ್ದು, ಮೆಟ್ರೋ ಕಾಮಗಾರಿ ನಡೆಯುವಾಗ ಬಿಎಂಆರ್‌ಸಿಎಲ್ ಸಂಸ್ಥೆ ಕೂಡಾ ಈ ಸೇತುವೆ ಪುನರ್ ನಿರ್ಮಾಣ ಮಾಡಲಿಲ್ಲ.

ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮೈಸೂರು-ಬೆಂಗಳೂರು ನಡುವೆಏಕ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಯಿತು. ಆ ಸಮಯದಲ್ಲಿಯೂ ಈ ಸೇತುವೆಯನ್ನು ಪುನರ್ ನಿರ್ಮಾಣವಾಗಲಿ ಅಗಲೀಕರಣವಾಗಲಿ ಮಾಡಲಿಲ್ಲ.

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಾಗಿ ವರ್ಷಗಳೇ ಕಳೆಯುತ್ತಿದ್ದರೂ ಬಿ-ಸ್ಮೈಲ್ ಯೋಜನೆಯಲ್ಲಿ ಈ ಸೇತುವೆ ನಿರ್ಮಾಣವಾಗಬೇಕಾಗಿತ್ತು. ಆದರೆ, ಈ ಸೇತುವೆ ವಿಚಾರಿಸಿದರೆ ಯಾವ ಅಧಿಕಾರಿಗಳ ಬಳಿಯೂ ಸೇತುವೆ ಕುರಿತ ಮಾಹಿತಿ ಇಲ್ಲ.

ಈ ಸಂಬಂಧ ವಿಶ್ವ ಬ್ಯಾಂಕ್ ನೆರವಿನಿಂದ ನಗರದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಉಸ್ತುವಾರಿ ಮುಖ್ಯಎಂಜಿನಿಯರ್ ಎಸ್.ವಿ.ರಾಜೇಶ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಈ ಸೇತುವೆ ತುಂಬಾ ಕಿರಿದಾಗಿದೆ, ಜನದಟ್ಟಣೆಯ ಸಮಯದಲ್ಲಿ ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಸಮಸ್ಯೆಯಾಗುತ್ತಿದೆ. ಆದರೆ, ವಿಶ್ವಬ್ಯಾಂಕ್ ನೆರವಿನಡಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಗಳಲ್ಲಿ ಈ ಸೇತುವೆ ಅಗಲೀಕರಣ ಸೇರಿಸಿಲ್ಲ. ಆಯಾ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಕೈಗೊಂಡಿರಬಹುದು ಎಂದರು.

-----

ಚರ್ಚಿಸಿ ನಿರ್ಮಾಣಕ್ಕೆ ಕ್ರಮ

ಈ ಸೇತುವೆಯನ್ನು ಬಿ-ಸ್ಮೈಲ್ ಯೋಜನೆಯಡಿ ನಿರ್ಮಾಣ ಮಾಡಬೇಕಾಗಿತ್ತು. ಆದರೆ, ಇಲ್ಲಿನ ಕಾಮಗಾರಿಗಳ ಪಟ್ಟಿಯಲ್ಲೂ ಹೆಸರಿಲ್ಲ. ಈ ಕೂಡಲೆ ಪಶ್ಚಿಮ ಪಾಲಿಕೆಯಿಂದ ನಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಈ ಸೇತುವೆ ಅಗಲೀಕರಣ ಅಥವಾ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

-ಡಾ.ರಾಜೇಂದ್ರ ಕೆ.ವಿ., ಪಶ್ಚಿಮ ಪಾಲಿಕೆ ಆಯುಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ಏರಿ ಕಬಳಿಕೆಗೆ ನಕಲಿ ದಾಖಲೆ: 9 ವರ್ಷ ಬಳಿಕ ಮರುತನಿಖೆ
ವಿಶ್ವಬ್ಯಾಂಕ್‌ ನೆರವಿನ 148 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿ ಕಾಮಗಾರಿ