ರಂಗ ಕಲೆಗೆ ನಾಟಕಕಾರ-ಪ್ರೇಕ್ಷಕ ಇಬ್ಬರೂ ಮುಖ್ಯ

KannadaprabhaNewsNetwork | Published : Oct 25, 2024 12:53 AM

ಸಾರಾಂಶ

ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದ ರಂಗಾಯಣದಲ್ಲಿ ನಾಟಕ ಅವಲೋಕನ ಕಾರ್ಯಾಗಾರವನ್ನು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಂಗ ಕಲೆ ಹೇಳಿಕೊಡುವುದು ಕಷ್ಟ. ನಾಟಕ ಮಾಡುವವರು ಮತ್ತು ನಾಟಕ ನೋಡುವವರು ಇಬ್ಬರೂ ರಂಗ ಕಲೆಗೆ ಬಹಳ ಮುಖ್ಯ ಎಂದು ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಹೇಳಿದರು.

ಇಲ್ಲಿನ ಸುವರ್ಣ ಸಂಸ್ಕೃತಿ ಭವನದದಲ್ಲಿ ಶಿವಮೊಗ್ಗ ರಂಗಾಯಣದಲ್ಲಿ ‘ಗುಣಮುಖ’ ನಾಟಕದ ತುಣುಕೊಂದನ್ನು ಓದುವುದರ ಮೂಲಕ ನಾಟಕ ಅವಲೋಕನ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಕ್ಕೆ ಒಂದು ಮಿತಿ ಇರುತ್ತದೆ. ನೋಡುಗರ ಭಾವನೆ ಅರ್ಥ ಮಾಡಿಕೊಂಡು ಅಭಿನಯ ಮಾಡಬೇಕಾಗುತ್ತದೆ. ನೋಡುವವರು ಮತ್ತು ಅಭಿನಯಿಸುವವರಿಗೆ ಅವಿನಾಭಾವ ಸಂಬಂಧವಿರುತ್ತದೆ. ಕಲೆಯನ್ನು ಹೇಗೆ ಪರಿಚಯ ಮಾಡಿಕೊಳ್ಳಬೇಕು. ಹೇಗೆ ಅರ್ಥೈಸಿಕೊಳ್ಳಬೇಕು. ಭಾಷೆ, ಪ್ರಭಾವ, ಎಲ್ಲವನ್ನೂ ತಿಳಿದು ಬದುಕಿನ ಜೊತೆ ಕೆಲಸ ಮಾಡುವುದೇ ರಂಗ ಕಲೆ ಎಂದರು.

ಕೆಲವೊಂದು ರುಚಿ ಅಥವಾ ರಸಗಳ ಜೊತೆಗೆ ಅಭಿನಯಿಸಬೇಕಾಗುತ್ತದೆ. ಮಾತು, ಮೌನಗಳ ಮೂಲಕ ಸಂವಹನ ಮಾಡಬೇಕಾಗುತ್ತದೆ. ಹಲವಾರು ವಿಭಾಗಗಳಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳನ್ನು ಪ್ರಪಂಚದ ಬೇರೆ ಬೇರೆ ಸಮಸ್ಯೆಗಳನ್ನು ಕೂಡ ಬಿಂಬಿಸುವ ಒಂದೇ ಒಂದು ಮಾಧ್ಯಮ ಅದು ರಂಗಭೂಮಿ ಎಂದರು.

ನಟನಾಗಬೇಕೆಂಬ ಆಸೆ ಸಹಜ. ಆದರೆ, ಕಠಿಣ ಪರಿಶ್ರಮ ಬೇಕು. ಮತ್ತು ರಂಗಭೂಮಿ ಎಲ್ಲಾ ಆಕಾರಗಳಲ್ಲಿ ಪರಿಣಿತನಾದಾಗ ಆತ ಪ್ರಬುದ್ಧ ಕಲಾವಿದನಾಗುತ್ತಾನೆ ಎಂದು ಹೇಳಿದರು.

ಕಲಾವಿದರ ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಮಾತನಾಡಿ, ರಂಗಾಯಣದಿಂದ ಅತಿ ಅವಶ್ಯ ಕಾರ್ಯಕ್ರಮ ಇವತ್ತು ಆಗುತ್ತಿದೆ. ಸಿದ್ಧತೆ, ಪ್ರದರ್ಶನಕ್ಕಿಂತ ರಂಗ ಕಲಾವಿದರಿಗೆ ಈ ಅವಲೋಕನ ಕಾರ್ಯಾಗಾರ ಅತಿ ಅವಶ್ಯ. ಇದೊಂದು ಬಹಳ ದೊಡ್ಡ ಅವಕಾಶ ಎಂದರು.

ಇತ್ತೀಚೆಗೆ ಸಾಹಿತ್ಯ ವಿಮರ್ಶಕರು ಕಡಿಮೆಯಾಗುತ್ತಿದ್ದಾರೆ. ರಂಗ ವಿಮರ್ಶೆಗಳು ವರದಿ ರೂಪದಲ್ಲಿ ಬರುತ್ತಿವೆ. ಪ್ರೇಕ್ಷಕನ ಸಹಜ ಖುಷಿ ಅವಲೋಕಿಸುವ ವಿಮರ್ಶೆ ಬರಬೇಕು ಮತ್ತು ಇದು ನಾಟಕದ ಬೇರೆ ಬೇರೆ ಮಜಲು ಅರ್ಥ ಮಾಡಿಕೊಡುತ್ತದೆ ಎಂದರು.

ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ, ಪ್ರೊ. ಮೇಟಿ ಮಲ್ಲಿಕಾರ್ಜುನ, ಡಾ. ಜಿ.ಆರ್.ಲವ ಉಪಸ್ಥಿತರಿದ್ದರು.

Share this article