ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಉಭಯ ಗುರುಗಳು: ಎಸ್.ವಿ. ಸಂಕನೂರ

KannadaprabhaNewsNetwork |  
Published : Jul 03, 2026, 02:15 AM IST
ಕಾರ್ಯಕ್ರಮವನ್ನು ಬಾಳೆಹೊನ್ನೂರಿನ ರಂಭಾಪುರಿ ಮಹಾಪೀಠದ ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಪಂ. ಪುಟ್ಟರಾಜ ಗವಾಯಿಗಳು ಅಂಧರಾಗಿ, ತ್ರಿಭಾಷಾ ಪಂಡಿತರಾಗಿ 60 ಪುಸ್ತಕಗಳನ್ನು ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಪುರಾಣ, ನಾಟಕ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ.

ಗದಗ: ಸಮಾಜದ ಅಭಿವೃದ್ಧಿಗಾಗಿ ಬದುಕಿದವರನ್ನು ಸಮಾಜ ಸ್ಮರಣೆ ಮಾಡುತ್ತದೆ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಅಂಧ, ಅನಾಥ ಮಕ್ಕಳನ್ನು ಸಲುಹಿ ಅವರಿಗೆ ಶಿಕ್ಷಣ, ಸಂಗೀತ, ಅನ್ನ ನೀಡಿ ಬದುಕನ್ನು ನೀಡಿದವರು ಉಭಯ ಗುರುಗಳು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬುಧವಾರ ರಾತ್ರಿ ಲಿಂ.ಪಂ. ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯಾರಾಧನೆ ಹಾಗೂ ಸಂಗೀತ ಸಮಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂ. ಪುಟ್ಟರಾಜ ಗವಾಯಿಗಳು ಅಂಧರಾಗಿ, ತ್ರಿಭಾಷಾ ಪಂಡಿತರಾಗಿ 60 ಪುಸ್ತಕಗಳನ್ನು ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಪುರಾಣ, ನಾಟಕ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ. 16 ವಾದ್ಯಗಳನ್ನು ನುಡಿಸುವ ಸಾಮರ್ಥ್ಯ ಪಂ. ಪುಟ್ಟರಾಜ ಗವಾಯಿಗಳಿಗೆ ಮಾತ್ರ ಸಾಧ್ಯವಿದೆ. ಅವರ ಸೇವೆಗೆ ಕೇಂದ್ರ, ಅನ್ಯ ರಾಜ್ಯ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಂದ ಪ್ರಶಸ್ತಿಗಳ ಸುರಿಮಳೆ ಆಗಿದೆ. ಅವರ ಸೇವೆಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು. ಮುಂದಿನ ದಿನಗಳಲ್ಲಿ ಆ ಕಾರ್ಯ ಆಗುತ್ತದೆ ಎಂದು ಭರವಸೆ ಇದೆ ಎಂದರು.

ಕೀರ್ತನ ಸಮ್ಮೇಳನದ ಸಾನ್ನಿಧ್ಯವನ್ನು ಬಾಳೆಹೊನ್ನೂರಿನ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ವಹಿಸಿದ್ದರು. ಅಧ್ಯಕ್ಷತೆಯನ್ನು ಎಮ್ಮಿಗನೂರಿನ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.

ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಮ್ಮುಖವನ್ನು ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀಗಳು, ಹೂವಿನಹಡಗಲಿಯ ಡಾ. ಹಿರಿಯ ಶಾಂತವೀರ ಸ್ವಾಮಿಗಳು, ಮೈನಹಳ್ಳಿ ಬಿಕನಹಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು. ನರೇಗಲ್ ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಅಡ್ನೂರ, ರಾಜೂರ, ಗದಗ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅಲಮೇಲ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಚಂದ್ರು ಬಾಳಿಹಳ್ಳಿಮಠ, ಮಹೇಶ ಶಾಬಾದಿಮಠ, ವಿ.ಎಸ್. ಮಾಳೇಕೊಪ್ಪಮಠ, ಹೇಮರಾಜ ಶಾಸ್ತ್ರಿ ಹಿರೇಮಠ, ಸೋಲ್ ಟ್ರಸ್ಟ್‌ ಸದಸ್ಯ ಪರಶುರಾಮ ಕಟ್ಟಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಗದ್ಗುರು ಸನ್ನಿದಿಯವರಿಂದ ಆಶ್ರಮದ ನೂತನ ವೆಬ್‌ಸೈಟ್ ಹಾಗೂ ಲೋಗೋ ಲೊಕಾರ್ಪಣೆ ಮಾಡಲಾಯಿತು.ಬದುಕನ್ನು ಸಾರ್ಥಕಗೊಳಿಸಿಕೊಳ್ಳಿ

ಗದಗ: ಬಹು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ಪ್ರಾಪ್ತವಾಗಿದ್ದು, ಅರಿವುಳ್ಳ ಜೀವನದಲ್ಲಿ ಆದರ್ಶ ಚಿಂತನೆಗಳನ್ನು ಅಳವಡಿಸಿಕೊಂಡು ಹುಟ್ಟು ಮತ್ತು ಮೃತ್ಯುವಿನ ಮಧ್ಯೆ ಇರುವ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.ಬುಧವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಉಭಯ ಗಾನವಿಶಾರದ ಲಿಂ. ಪಂಚಾಕ್ಷರ ಗವಾಯಿಗಳ 82ನೇ ವರ್ಷದ ಹಾಗೂ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳ 16ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಹುಟ್ಟಿದಾಗ ಉಸಿರಿರುತ್ತದೆ, ಆದರೆ ಹೆಸರಿರುವುದಿಲ್ಲ, ಮರಣ ಹೊಂದಿದಾಗ ಉಸಿರಿರುವುದಿಲ್ಲ, ಆದರೆ ಹೆಸರು ಉಳಿಯುತ್ತದೆ. ಹಾಗೆ ಹೆಸರುಳಿಯುವಂತೆ ಬಾಳಿ ಬದುಕಿದವರು ವೀರೇಶ್ವರ ಪುಣ್ಯಾಶ್ರಮದ ಪುಣ್ಯಾತ್ಮರು. ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ಕೃಪಾಶೀರ್ವಾದದಿಂದ ಸ್ಥಾಪಿತವಾದ ಈ ಆಶ್ರಮದಲ್ಲಿ ಪಂಚಾಕ್ಷರ ಗವಾಯಿಗಳು ಅಂಧರ ಬಾಳಿಗೆ ಬೆಳಕಾಗಿ ಸಂಗೀತ ಜ್ಞಾನ ಅನುಗ್ರಹಿಸಿದರು.ಅದೇ ಹಾದಿಯಲ್ಲಿ ಡಾ. ಪುಟ್ಟರಾಜ ಕವಿ ಗವಾಯಿಗಳು ಸಾಹಿತ್ಯ, ಪುರಾಣಗಳ ಮೂಲಕ ಶ್ರಮಿಸಿದರು. ಆ ಜವಾಬ್ದಾರಿಯನ್ನು ಕಲ್ಲಯ್ಯಜ್ಜನವರು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮಾತನಾಡಿದರು. ಬಲೂಟಗಿ ಸಿದ್ದೇಶ್ವರ ಶಾಸ್ತ್ರಿಗಳು ನಿರೂಪಿಸಿದರು. ಸಮಾರಂಭದ ನಂತರ ಮಹಾ ಅನ್ನದಾಸೋಹ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹರು ಮತದಾರ ಪಟ್ಟಿಯಲ್ಲಿ ಉಳಿಯಲಿ
ಫ.ಗು.ಹಳಕಟ್ಟಿಯಿಂದ ವಚನಗಳಿಗೆ ಶಾಶ್ವತ ಅಸ್ತಿತ್ವ