ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ದೂರಿಗೆ ಕ್ರಮ
ಕನ್ನಡಪ್ರಭ ವಾರ್ತೆ, ಹನೂರುಪಟ್ಟಣದ ಗೋಪಾಲ್ ನಾಯ್ಡು ಎಂಬವವರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನು ತೆರವು ಮಾಡುವಂತೆ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಹಸೀಲ್ದಾರ್ ದೂರು ನೀಡಿದ ಹಿನ್ನೆಲೆ ಸರ್ವೆ ಅಧಿಕಾರಿಗಳು ಸರ್ಕಾರಿ ಜಮೀನಿಗೆ ಗಡಿ ಗುರುತಿಸಿದರು.
ಗೋಪಾಲ್ ನಾಯ್ಡು ಎಂಬುವರು ಗ್ರಾಮದ ಸರ್ವೆ ನಂಬರ್ 155 ಬಿ 1ರಲ್ಲಿ 2.29 ಎಕರೆ ಹಳ್ಳ ಮತ್ತು 1.55 ಎಕರೆ ಸರ್ಕಾರಿ ಜಮೀನು ಇದ್ದು, ಈ ಭಾಗವನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದರು. ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಜಮೀನು ಮತ್ತು ಸಾರ್ವಜನಿಕ ಹಳ್ಳವನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಹಳ್ಳಕ್ಕೆ ಮಣ್ಣು ಹಾಕಿಕೊಳ್ಳುವ ಮೂಲಕ ಮಳೆಯ ನೀರು ಸರಾಗವಾಗಿ ಹೋಗಲು ತೊಡಕಾಗಿ ಪರಿಣಮಿಸಿತ್ತು. ಈ ಸಂಬಂಧ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಹಸಿಲ್ದಾರ್ ಕಚೇರಿಗೆ ದೂರು ನೀಡಿ ಕೋಟ್ಯಂತರ ರು.ಬೆಲೆ ಬಾಳುವ ಸರ್ಕಾರಿ ಜಮೀನು ಹಾಗೂ ಹಳ್ಳವನ್ನು ಉಳಿಸುವಂತೆ ಜೂ. 24ರಂದು ದೂರು ನೀಡಿದ್ದರು.ಈ ಸಂಬಂಧ ತಹಸಿಲ್ದಾರ್ ಚೈತ್ರ ರವರ ಮಾರ್ಗದರ್ಶನದಲ್ಲಿ ಹನೂರು ಪಟ್ಟಣದ ರಾಜಸ್ವ ನಿರೀಕ್ಷಕ ಶೇಷಣ್ಣ, ಭೂಮಾಪಕ ಸಿಂಗಾರ್ ಶೆಟ್ಟಿ ಹಾಗೂ ದೂರುದಾರರ ಸಮ್ಮುಖದಲ್ಲಿ ಸರ್ವೆ ನಡೆಸಿ ಹಳ್ಳ ಹಾಗೂ ಜಮೀನಿಗೆ ಗಡಿ ಗುರುತಿಸಲಾಗಿದೆ.
ಮುಂದಿನ ದಿನಗಳಲ್ಲಿ ಹಳ್ಳ ಹಾಗೂ ಸರ್ಕಾರಿ ಜಮೀನಿಗೆ ಪ್ರತ್ಯೇಕವಾಗಿ ನಕಾಶೆ ತಯಾರು ಮಾಡಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಮಾಡಿ ಸರ್ಕಾರಿ ಹಳ್ಳ ಹಾಗೂ ಜಮೀನನ್ನು ರಕ್ಷಣೆ ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗೋಪಾಲ್ ನಾಯ್ಡು ತಮಗೆ ಹತ್ತಾರು ಎಕರೆ ಜಮೀನಿದ್ದರೂ ಕೋಟ್ಯಂತರ ಬೆಲೆಬಾಳುವ ಸರ್ಕಾರಿ ಜಮೀನು ಮತ್ತು ಹಳ್ಳವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಅಧಿಕಾರಿಗಳು ಸರ್ವೆ ನಡೆಸಿ ಸರ್ಕಾರ ಆಸ್ತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್ಕಾರಿ ಆಸ್ತಿ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ಬಸವರಾಜ್ ಮುಖಂಡರಾದ ಕಿರಣ್ ಉಪಸ್ಥಿತರಿದ್ದರು