ಕುಷ್ಟಗಿ: ಭೋವಿ ಜನಾಂಗದವರು ಆರ್ಥಿಕವಾಗಿ ಹಿಂದುಳಿದಿದ್ದು, ಸಮಸ್ಯೆಗೆ ಸ್ಥಳೀಯವಾಗಿ ನ್ಯಾಯ ಸಿಗದಿದ್ದರೆ ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಸಮಾಜವನ್ನು ಸಂಘಟಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಭೋವಿ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ ಎಚ್ಚರಿಸಿದರು.
ವಡ್ಡರ ಸಮುದಾಯದ ಮಂತ್ರಿಗಳಿದ್ದು, ಅವರು ರಾಜಕೀಯ ಹಾಗೂ ಹಣದ ಬಲ ಹೊಂದಿದ್ದಾರೆ. ಆದರೆ ನಮ್ಮ ಭೋವಿ ಜನಾಂಗದವರು ಆರ್ಥಿಕವಾಗಿ ಹಿಂದುಳಿದಿದ್ದು, ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2014ರ ವರೆಗೆ ನಮ್ಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈಗ ಏಕೆ ನೀಡುತ್ತಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯಲಾಗುವುದು. ‘ಬೆಂಗಳೂರು ಚಲೋ’ ನಡೆಸಿ ಸರ್ಕಾರದ ಗಮನ ಸೆಳೆಯುತ್ತೇವೆ. ಅಗತ್ಯಬಿದ್ದರೆ ರಾಜ್ಯಾದ್ಯಂತ ಭೋವಿ ಸಮಾಜವನ್ನು ಸಂಘಟಿಸಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.ಹಾಬಲಕಟ್ಟಿ ಗ್ರಾಮದ ಯುವ ಮುಖಂಡ ಶರಣಪ್ಪ ಭೋವಿ ಮಾತನಾಡಿ, ನಮ್ಮ ಗ್ರಾಮದ ಭೋವಿ ಸಮುದಾಯದವರಿಗೆ 2014ರ ವರೆಗೆ ಎಸ್‌ಸಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಬಳಿಕ ಪ್ರಮಾಣಪತ್ರ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಆರಂಭಿಸಿದ್ದು, ನ್ಯಾಯ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಅಗತ್ಯಬಿದ್ದರೆ ಉಪವಾಸ ಸತ್ಯಾಗ್ರಹಕ್ಕೂ ಮುಂದಾಗುತ್ತೇವೆ ಎಂದರು.
ಗ್ರಾಮಸ್ಥರಾದ ಶರಣಪ್ಪ ಭೋವಿ, ಮುತ್ತಪ್ಪ ಭೋವಿ, ಹನುಮಂತ ಭೋವಿ, ಕಾಲಿಂಗಪ್ಪ ಭೋವಿ, ಅಜಿತ್ ಭೋವಿ, ಮಲ್ಲಪ್ಪ, ಹನುಮಂತಪ್ಪ, ಶಾವಕ್ಕ, ಬಾಳಮ್ಮ, ಸುಮಿತ್ರಾ, ಸಾವಿತ್ರಿ, ಯಲ್ಲವ್ವ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಅಲ್ಲಿಯೇ ಊಟ ತಯಾರಿಸಿಕೊಂಡು ಸೇವಿಸಿ ಧರಣಿ ಮುಂದುವರಿಸಿದರು. ಮಂಗಳವಾರವೂ ಪ್ರತಿಭಟನೆ ಮುಂದುವರಿದಿದೆ.