ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದ ಹೊರವಲಯದಲ್ಲಿ ಖಾಸಗಿ ಶಾಲಾ ಬಸ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಎಲ್‌ಕೆಜಿ ವಿದ್ಯಾರ್ಥಿ ಪ್ರಥಮ ಅರುಣ ಲಮಾಣಿ ಖಾಸಗಿ ಶಾಲಾ ವಾಹನದಡಿ ಸಿಲುಕಿ ಡಿ. 17ರಂದು ಮೃತಪಟ್ಟ ಘಟನೆ ಹಿನ್ನೆಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ.
ಖಾಸಗಿ ಶಾಲಾ ವಾಹನಗಳಲ್ಲಿ ಜಿಪಿಎಸ್ ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆ, ಮಕ್ಕಳ ಸುರಕ್ಷತೆಗೆ ಆಯಾಗಳ ನೇಮಕ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಸಾರಿಗೆ ಇಲಾಖೆಯಿಂದ ಈ ಮಾರ್ಗಸೂಚಿಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲವೆಂದು ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಶಾಲಾ ವಾಹನಗಳ ಸುರಕ್ಷತೆ ಪರಿಶೀಲನೆ ಹಾಗೂ ಮಕ್ಕಳ ಸಂರಕ್ಷಣೆಯ ಖಾತರಿಪಡಿಸುವ ಜವಾಬ್ದಾರಿ ಸಾರಿಗೆ ಇಲಾಖೆಯ ಮೇಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ಆಯೋಗ, ಕಾಲಕಾಲಕ್ಕೆ ಶಾಲಾ ವಾಹನಗಳ ತಪಾಸಣೆ ನಡೆಸಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸೂಚಿಸಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನೇಕ ಶಾಲಾ ವಾಹನಗಳು ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರಿಂದ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ. ಇದೇ ವೇಳೆ, ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ವಾಹನಗಳಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಗಳು ಹಾಗೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಮತ್ತು ಕಡ್ಡಾಯವಾಗಿ ಜಾರಿಗೆ ತರುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶೀಧರ ಕೋಸಂಬೆ ಅವರು ಪತ್ರ ಬರೆದು ಸೂಚಿಸಿದ್ದಾರೆ.
ಇನ್ನಾದರೂ ಸಾರಿಗೆ ಇಲಾಖೆ ಅಧಿಕಾರಿಗಳು, ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತು ಬಸ್ ಚಾಲಕ ನಿರ್ವಾಹಕರು ಗಮನ ಹರಿಸುತ್ತಾರಾ ಕಾಯ್ದು ನೋಡಬೇಕು.