ಬಳ್ಳಾರಿ: ಬುದ್ಧನ ವೈಚಾರಿಕತೆಯನ್ನು ಅಳವಡಿಸಿಕೊಂಡು ದೇಶದ ಅತಿದೊಡ್ಡ ಪಿಡುಗಾದ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಪ್ರಬುದ್ಧ ಭಾರತ ನಿರ್ಮಿಸುವ ಕನಸನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡಿದ್ದರು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಶ್ವನಾಥ ತಿಳಿಸಿದರು.
ಪಂಚಾಯಿತಿಗಳಿಂದ ಪಾರ್ಲಿಮೆಂಟಿನವರೆಗೂ ಜಾತಿ ಆಧಾರದ ಮೇಲೆ ಜನನಾಯಕರ ಆಯ್ಕೆಯಾಗುತ್ತದೆ. ಭಾರತದಂತಹ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಅಸ್ಪೃಶ್ಯತೆ ಎಂಬುದು ಇಂದಿಗೂ ಕಾಣಸಿಗುತ್ತದೆ. ಜಾತಿ ಸಂಕೋಲೆಯನ್ನು ತೊಡೆದು ಹಾಕಲು ಬಾಬಾಸಾಹೇಬರು ಬುದ್ಧನ ಮಾರ್ಗವನ್ನು ಅನುಸರಿಸಿದರು ಎಂದು ತಿಳಿಸಿದರು.
1990ರ ದಶಕದ ನಂತರ ಮಹಾರಾಷ್ಟ್ರ ರಾಜ್ಯ ಬಾಬಾಸಾಹೇಬರ ವಿಚಾರಧಾರೆಗಳನ್ನು ಪುಸ್ತಕಗಳ ಮೂಲಕ ಬೆಳಕಿಗೆ ತಂದು ಅವರ ವ್ಯಕ್ತಿತ್ವವನ್ನು ಪ್ರಸಿದ್ಧಿಗೊಳಿಸಿದರು. ನಂತರದಲ್ಲಿ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಸಂವಿಧಾನ ಶಿಲ್ಪಿಯನ್ನು ಗುರುತಿಸಿ ಗೌರವಿಸಿದರು. ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವ ಎಂಬ ಧ್ಯೇಯಗಳೊಂದಿಗೆ ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವುದು ಅಂಬೇಡ್ಕರ್ ಅವರ ಗುರಿಯಾಗಿತ್ತು. ಇದೇ ಮನಸ್ಥಿತಿಯಲ್ಲಿ ಅವರು ಭಾರತದ ಸಂವಿಧಾನವನ್ನು ರಚಿಸಿದರು ಎಂದರು.ದಿಕ್ಸೂಚಿ ಭಾಷಣ ಮಾಡಿದ ಚಿತ್ರನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅವರು ಶಿಕ್ಷಣ ಎಂಬ ಅಸ್ತ್ರದ ಮೂಲಕ ಪ್ರಬುದ್ಧ ಭಾರತ ನಿರ್ಮಾಣ ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಇದಕ್ಕಾಗಿಯೇ 1956ರಲ್ಲಿ ಅವರು ‘ಪ್ರಬುದ್ಧ ಭಾರತ’ ಎಂಬ ಪತ್ರಿಕೆಯನ್ನು ಆರಂಭಿಸಿ ಸಮಾನತೆಯ ಸಂದೇಶವನ್ನು ದೇಶದೆಲ್ಲೆಡೆ ಹರಡಲು ಯತ್ನಿಸಿದರು ಎಂದು ಹೇಳಿದರು.
ಅಂಬೇಡ್ಕರ್ ಅವರು ಸೈದ್ಧಾಂತಿಕ ಪ್ರತಿರೋಧಿಯಾಗಿ ವರ್ಣಾಶ್ರಮವನ್ನು ವಿರೋಧಿಸಿದ್ದರು. ಮಾನವ ಜಾತಿಯೇ ಒಂದು ಜಗತ್ತು ಎಂಬ ತತ್ವದಡಿ ಬುದ್ಧಮಾರ್ಗವನ್ನು ಅನುಸರಿಸಿದರು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಲೆಕ್ಕಪರಿಶೋಧನ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ ವೇದಿಕೆಯಲ್ಲಿದ್ದರು.
ಸಮ್ಮೇಳನದ ಸಂಚಾಲಕ ಪ್ರೊ. ಗೌರಿ ಮಾಣಿಕ್ ಮಾನಸ ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಷ್ಮಾ ಜೋಗನ್ ನಿರೂಪಿಸಿದರು. ದೇಶದ ವಿವಿಧ ರಾಜ್ಯಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.