ಹುಬ್ಬಳ್ಳಿ: ನವಲಗುಂದ ಖಾಸಗಿ ಶಾಲೆಯ ಕಟ್ಟಡದ ಮೇಲಿಂದ 10 ವರ್ಷದ ಬಾಲಕ ಬಿದ್ದು ಮೃತನಾಗಿದ್ದ ಬಾಲಕ ಅಂತ್ಯಕ್ರಿಯೆ ಸ್ವಗ್ರಾಮ ಶಾನವಾಡದಲ್ಲಿ ಶುಕ್ರವಾರ ನಡೆಯಿತು. ಬಾಲಕನ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಈ ನಡುವೆ ಬಾಲಕನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಾಲೆಯ ಶಿಕ್ಷಕ ಹಾಗೂ ಮುಖ್ಯಸ್ಥ ಭರತೇಶನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಏತನ್ಮಧ್ಯೆ ಶಾಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆಯೂ ರದ್ದು ಮಾಡಿದೆ.
ನವಲಗುಂದದ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ 4ನೆಯ ತರಗತಿ ಓದುತ್ತಿದ್ದ ಬಾಲಕ ಆಕಾಶ ನೀಲಣ್ಣವರ (10) ಕಟ್ಟಡ ಮೇಲಿಂದ ಬಿದ್ದು ಮೃತಪಟ್ಟಿದ್ದ. ಸಾಯುವ ಮುನ್ನ ಶಾಲೆಯ ಮುಖ್ಯಸ್ಥ ಭರತೇಶ ತನಗೆ ಹೊಡೆದಿದ್ದಾರೆ. ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ತನ್ನ ಮಗನ ಸಾವಿಗೆ ಶಾಲೆಯ ಶಿಕ್ಷಕರ ಕಿರುಕುಳವೇ ಕಾರಣ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.
ದೂರಿನನ್ವಯ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ, ಶಾಲೆಯ ಮುಖ್ಯಸ್ಥ ಭರತೇಶ ಎಂಬುವವರನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ತನಿಖೆ ಚುರುಕು: ಆರೋಪಿಯನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ಶಾಲಾ ಕಟ್ಟಡದ ಮೇಲಿಂದ ಅದ್ಹೇಗೆ ಬಾಲಕ ಬಿದ್ದನು. ಶಾಲೆಯಲ್ಲಿ ಎರಡ್ಮೂರು ದಿನಗಳಿಂದ ಏನೇನು ನಡೆದಿವೆ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಶಾಲೆಯ ಮಾನ್ಯತೆ ರದ್ದು
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ. ಶಾಲೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಶಾಲೆಯ ಮಾನ್ಯತೆಯನ್ನು ರದ್ದು ಮಾಡುತ್ತೇವೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿ: ವಸತಿ ಸಾಲಿಗೆ ಕಳಸಬ್ಯಾಡಿ... ನಾ ಸಾಲಿಗೆ ಹೋಗಾಕ ಒಲ್ಲೆ.., ನನಗ ಅಲ್ಲಿ ಹೊಡಿತಾರೆ.. ಅಂತ್ಹೇಳಿ ನನ್ನ ಮಗ ಹೇಳ್ತಿದ್ದ. ಆದರೂ ಸಾಲಿ ಕಲಿಲಿ ಅಂತ ಮಾಸ್ತರಗ ಹೊಡಿಬ್ಯಾಡ್ರಿ ಅಂತ ಹೇಳಿ ಬಂದಿದ್ದೆ.. ಈಗ ನೋಡಿದ್ರ ಹೊಡಿದ್ ನನ್ನ ಮಗನ ಕೊಂದಾರ್ರಿ...!
4ನೆಯ ತರಗತಿ ಓದುತ್ತಿದ್ದ ಬಾಲಕನಿಗೆ ಶಾಲೆಯ ಶಿಕ್ಷಕರು ಹೊಡೆಯುತ್ತಿದ್ದರಂತೆ. ಹಿಂದೆಯೂ ಇದೇ ರೀತಿ ಹೊಡೆದಿದ್ದರಂತೆ. ಆಗ ಬಾಲಕನಿಗೆ ಜ್ವರ ಬಂದಿತ್ತು. ಈ ಕಾರಣಕ್ಕಾಗಿಯೇ ತನ್ನ ತಂದೆ ಎದುರಿಗೆ ಶಾಲೆಗೆ ಕಳುಹಿಸಬೇಡ. ಅವರ ಹೊಡಿತಾರೆ ಎಂದು ಹೇಳಿಕೊಂಡಿದ್ದನಂತೆ. ಅದನ್ನು ನೆನಪಿಸಿಕೊಂಡು ರೋಧಿಸುತ್ತಿದ್ದ ತಂದೆ ವಸಂತ, ಮಾಧ್ಯಮದ ಎದುರಿಗೆ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ.ಶಾಲೆಯ ಶಿಕ್ಷಕರಿಗೆ ಹೊಡೆಯಬೇಡಿ. ತಿಳಿ ಹೇಳಿ ಎಂದು ಹೇಳಿ ಬಂದಿದ್ದೆ. ಆದರೂ ಹೊಡೆದು ಕೊಂದು ಹಾಕಿದ್ದಾರೆ ನನ್ನ ಮಗನನ್ನು ಎಂದು ರೋದಿಸಿದರು. ಅಲ್ಲದೇ, ಮಗು ಸಾಯುವ ಮುನ್ನ ಶಿಕ್ಷಕರು ನನ್ನನ್ನು ಹೊಡೆದಿದ್ದಾರೆ ಎಂದು ಹೇಳಿ ಮೃತಪಟ್ಟಿದ್ದಾನೆ. ಆ ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇದ್ದ ಪೊಲೀಸರು, ಶಿಕ್ಷಣ ಇಲಾಖೆ ಆಯುಕ್ತರ ಬಳಿ ಕೇಳಿಕೊಳ್ಳುತ್ತಿದ್ದರು.