ಬೆಂಗಳೂರು : ಮನೆಯೊಂದರಲ್ಲಿ ಆಕಸ್ಮಿಕವಾಗಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವನ್ನಪ್ಪಿ, 9ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಗರದ ವಿಲ್ಸನ್ ಗಾರ್ಡನ್ ಸಮೀಪದ ಚಿನ್ನಯ್ಯನಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ಚಿನ್ನಯ್ಯನಪಾಳ್ಯದ ನಿವಾಸಿ ಮುಬಾರಕ್ (14) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಕಸ್ತೂರಮ್ಮ (35),ಸರಸಮ್ಮ (50), ಶಬೀನಾ ಬಾನು (35), ಫಾತೀಮಾ (8), ಖಯಲಾ (8), ಸುಬ್ರಮಣಿ (6), ಶೇಖ್ ನಜೀದ್ ಉಲ್ಲಾ (3), ಪ್ರಮೀಳಾ (38) ಹಾಗೂ ರಾಜೇಶ್ (40) ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಗಾಯಾಳುಗಳ ಪೈಕಿ ಕಸ್ತೂರಮ್ಮ ಹಾಗೂ ಅವರ ಪುತ್ರಿ ಖಯಾಲಾ ಅವರಿಗೆ ಶೇ.30 ರಷ್ಟು ಸುಟ್ಟು ಗಾಯಗಳಾಗಿವೆ. ಅಲ್ಲದೆ ಈ ಸ್ಫೋಟದ ತೀವ್ರತೆಗೆ 20ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಮೂರು ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಚಿನ್ನಯ್ಯನಪಾಳ್ಯದ ಕಸ್ತೂರಮ್ಮ ಅವರ ಮನೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
10*10 ಅಡಿ ಮನೆಗಳಲ್ಲಿ ಜೀವನ
ತಮಿಳುನಾಡು ಮೂಲದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕಸ್ತೂರಮ್ಮ ಅವರು, ತಮ್ಮ ಕುಟುಂಬದ ಜತೆ ಚಿನ್ನಯ್ಯನಪಾಳ್ಯದಲ್ಲಿ ನೆಲೆಸಿದ್ದಾರೆ. ಅಲ್ಲಿನ ಒಂದೇ ಕಟ್ಟಡದ ಮೊದಲ ಮಹಡಿಯಲ್ಲಿ ಕಸ್ತೂರಮ್ಮ ನೆಲೆಸಿದ್ದರೆ, ಕೆಳಹಂತದ ಮನೆಯಲ್ಲಿ ಮುಬಾರಕ್ ಕುಟುಂಬ ನೆಲೆಸಿತ್ತು. ಈ ಮನೆಯ ಆಜುಬಾಜಿನಲ್ಲಿ 10*10 ಅಡಿ ವಿಸ್ತೀರ್ಣದ 17ಕ್ಕೂ ಹೆಚ್ಚಿನ ಸೀಟಿನ ಮನೆಗಳಿದ್ದವು.
ಎಂದಿನಂತೆ ಗುರುವಾರ ರಾತ್ರಿ ಊಟ ಮಾಡಿ ಸ್ಥಳೀಯರು ನಿದ್ರೆಗೆ ಜಾರಿದ್ದರು. ಆದರೆ ಕಸ್ತೂರಮ್ಮ ಅವರ ಮನೆಯ ಸಿಲಿಂಡರ್‌ನಲ್ಲಿ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದ್ದು, ಬೆಳಗ್ಗೆ 8 ಗಂಟೆಗೆ ಏಕಾಏಕಿ ಆ ಸಿಲಿಂಡರ್ ಸಿಡಿದಿದೆ. ಆಗ ಮನೆಯಲ್ಲಿ ಅವರ 8 ವರ್ಷದ ಪುತ್ರಿ ಖಯಾಲ ಹಾಗೂ ಕಸ್ತೂರಮ್ಮ ಮಲಗಿದ್ದರು. ಸಿಲಿಂಡರ್ ಸ್ಫೋಟಕ್ಕೆ ಮನೆ ಕಟ್ಟಡ ಧರೆಗುರುಳಿದೆ.
ಇದರಿಂದ ಕೆಳಹಂತದ ಮನೆಯಲ್ಲಿದ್ದ ಮುಬಾರಕ್ ಹಾಗೂ ಫಾತಿಮಾ ಅವರ ಮೇಲೆಯೇ ಸಿಮೆಂಟ್ ಗೋಡೆ ಬಿದ್ದಿದೆ. ಇತ್ತ ಸ್ಫೋಟದ ತೀವ್ರತೆಗೆ ನೆರೆಹೊರೆಯ ಸೀಟಿನ ಮನೆಗಳ ಮೇಲೂ ಒಂದು ಅಂತಸ್ತಿನ ಕಟ್ಟಡದ ಅವಶೇಷಗಳು ಬಿದ್ದು ಅವುಗಳು ನೆಲಸಮಗೊಂಡಿವೆ.
ಈ ಸ್ಫೋಟದ ಶಬ್ದಕ್ಕೆ ಭಯಬಿದ್ದು ಕೆಲವರು ಮನೆಗಳಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ. ಆದರೆ ಬೆಳಗ್ಗೆ ಸೋಂಪಾದ ನಿದ್ರೆಯಲ್ಲಿದ್ದ ಮುಬಾರಕ್ ಹಾಗೂ ಆತನ ತಂಗಿ ಫಾತಿಮಾ ಸೇರಿದಂತೆ 10 ಮಂದಿ ಕುಸಿದ ಮನೆಗಳ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಮುಬಾರಕ್‌ನ ತಾಯಿ ಮನೆಯಿಂದ ಹೊರ ಇದ್ದರು. ತಕ್ಷಣವೇ ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ತೀವ್ರ ರಕ್ತಸ್ರಾವದಿಂದ ಮುಬಾರಕ್ ಕೊನೆಯುಸಿರೆಳೆದಿದ್ದಾನೆ.
ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಎರಡು ವಾಹನಗಳಲ್ಲಿ ಘಟನಾ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಲ್ಲದೆ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ಹಾಗೂ ಪೊಲೀಸರು ಅವಶೇಷಗಳಡಿ ಸಿಲುಕಿದವರನ್ನು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇನ್ನು ಬಾಂಬ್ ನಿಷ್ಕ್ರಿಯ ದಳ ಸಹ ತೆರಳಿ ತಪಾಸಣೆ ನಡೆಸಿತು. ಇನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಮುಗಿದ ಕೂಡಲೇ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಬಳಿಕ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಅವರು ಮಾಹಿತಿ ಪಡೆದರು. ಈ ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಂಬ್ ಸ್ಫೋಟದ ಆತಂಕ
ಸಿಲಿಂಡರ್ ಸಿಡಿತದ ತೀವ್ರತೆಗೆ ನೆರೆಹೊರೆಯ ನಿವಾಸಿಗಳು ಬೆಚ್ಚಿ ಬಿದ್ದಿದ್ದರು. ಸಿಡಿದ ಶಬ್ದಕ್ಕೆ ಬಾಂಬ್ ಸ್ಫೋಟವಾಗಿದೆ ಎಂದೇ ಸ್ಥಳೀಯರು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಹ ಭೇಟಿ ನೀಡಿ ಪರಿಶೀಲಿಸಿದರು. ಕೊನೆಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಬಾಂಬ್ ನಿಷ್ಕ್ರಿಯ ದಳ ಸ್ಪಷ್ಟಪಡಿಸಿದ ಬಳಿಕ ಆತಂಕ ನಿವಾರಣೆಯಾಯಿತು. ಘಟನಾ ಸ್ಥಳದಲ್ಲಿ ಸ್ಫೋಟದ ವಸ್ತುಗಳು ಸಹ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕಸ ಸಾಗಿಸಲು ಎರಡು ದಿನಗಳು
ಸಿಲಿಂಡರ್ ಸ್ಫೋಟದಿಂದ ಕುಸಿದು ಬಿದ್ದಿರುವ ಮನೆಗಳ ಕಸವನ್ನು ಸಾಗಿಸಲು ಎರಡ್ಮೂರು ದಿನಗಳಾದರೂ ಬೇಕಾಗುತ್ತದೆ. ಸಂಪೂರ್ಣವಾಗಿ ಕಸದ ತೆರವುಗೊಳಿಸಿದ ಬಳಿಕ ಘಟನೆಗೆ ಸ್ಪಷ್ಟವಾದ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಂಗಿ ಪಾರು, ಅಣ್ಣ ಸಾವು
ಮನೆಯಲ್ಲಿ ಬೆಳಗ್ಗೆ ಮುಬಾರಕ್ ಹಾಗೂ ಆತನ ತಂಗಿ ಫಾತಿಮಾ ಮಲಗಿದ್ದರು. ಮಕ್ಕಳು ನಿದ್ರೆಯಲ್ಲಿದ್ದ ಕಾರಣ ಅವರ ತಾಯಿ ಹೊರ ಹೋಗಿ ಕೆಲಸ ಮಾಡುತ್ತಿದ್ದರು. ಆಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿದಿದೆ. ಧರೆಶಾಯಿ ಕಟ್ಟಡದ ಅವಶೇಷಗಳಡಿ ಸಿಲುಕಿದ ಮಕ್ಕಳ ರಕ್ಷಣೆಗೆ ಪೋಷಕರು ಹರ ಸಾಹಸಪಟ್ಟರು. ಆದರೆ ಗೋಡೆಯೇ ಮೈಮೇಲೆ ಬಿದ್ದಿದ್ದ ಪರಿಣಾಮ ಗಂಭೀರ ಸ್ವರೂಪದ ಪೆಟ್ಟಾಗಿ ಮುಬಾರಕ್ ಮೃತಪಟ್ಟಿದ್ದಾನೆ. ಆದರೆ ಫಾತಿಮಾ ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನಯ್ಯನಪಾಳ್ಯದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ
ನಾನು ಬೆಳಗ್ಗೆ ಮನೆ ಸಮೀಪ ನಿಂತಿದ್ದೆ. ಆಗ ಜೋರಾದ ಶಬ್ದ ಕೇಳಿ ಬಂತು. ಏನಾಗುತ್ತದೆ ತಿಳಿಯುವ ವೇಳೆ ದಟ್ಟವಾದ ಹೊಗೆ ಹಾಗೂ ಧೂಳು ಆವರಿಸಿತು. ಅರೆ ಕ್ಷಣ ಬಾಂಬ್ ಸ್ಫೋಟವೇ ಆಗಿದೆ ಎಂತ ಭಾವಿಸಿದೆ.
-ಸ್ಥಳೀಯ ನಿವಾಸಿ