-ಹಲವು ಜಿಲ್ಲೆಗಳಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ಗ್ರಾಮೀಣ ತಂಡಗಳು
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 79ನೇಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಾತಂತ್ರ್ಯಹೋರಾಟದ ಕಿಚ್ಚು, ತ್ಯಾಗ ಬಲಿದಾನಗಳನ್ನು ಕಣ್ಣಮುಂದೆ ತರಿಸಿ ದೇಶಭಕ್ತಿಯನ್ನು ಮೇಳೈಸುವಂತೆ ಮಾಡಿದವು. ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಭಾಗಗಳಿಂದ ಮಹಿಳೆಯರು, ವಿದ್ಯಾರ್ಥಿಗಳು, ಯುವಜನರ ಕಲಾ ತಂಡಗಳು ಸ್ವಾತಂತ್ರ್ಯ ಪರಿಕಲ್ಪನೆಯುಳ್ಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ಇತರೆ ಸ್ವಾತಂತ್ರ್ಯ ಚಳವಳಿಗಳನ್ನು ನೆನಪಿಸುವ ದೇಶಭಕ್ತಿ, ಜಾನಪದ ಹೀಗೆ ಹಲವು ತರಹದ ಗೀತೆಗಳನ್ನು ಕಲಾವಿದರು ಹಾಡಿದ ಬಗೆ ಮನಕಲಕುವಂತಿತ್ತು.ಪದ್ಮಿನಿ ಅಚ್ಚಿ ಮತ್ತು ತಂಡದಿಂದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮಾಡಿದ ‘ನೃತ್ಯ ರೂಪಕ’ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಮೈಸೂರಿನ ಅಮ್ಮ ರಾಮಚಂದ್ರ ಮತ್ತು ತಂಡ ಜಾನಪದ ಸಂಗೀತ ಕಾರ್ಯಕ್ರಮಗಳು ನೋಡಗರ ಆಸಕ್ತಿಯನ್ನು ಹೆಚ್ಚಿಸಿತ್ತು. ಉತ್ತರ ಕನ್ನಡದಿಂದ ಬಂದಿದ್ದ ಲಿಲ್ಲಿ ಜಾಕಿ ಮತ್ತು ತಂಡವು ಮಾಡಿದ ಸಿದ್ಧಿ ಕುಣಿತ ವಿಶೇಷವಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದವರ ಮನಗೆದ್ದಿತ್ತು.ಹಾವೇರಿ ಜಿಲ್ಲೆಯಿಂದ ಬಂದ ಶಿವರುದ್ರಪ್ಪ ವೀರಬಸಪ್ಪ ಬಡಿಗೇರ ಮತ್ತು ತಂಡದಿಂದ ಪ್ರದರ್ಶನಗೊಂಡ ವೀರಗಾಸೆ ಹಲವರ ಗಮನಸೆಳೆಯಿತು. ದಾವಣಗೆರೆ ಜಿಲ್ಲೆಯಿಂದ ಬಿಂದು.ಎಸ್ ಮತ್ತು ತಂಡದಿಂದ ಲಂಬಾಣಿ ನೃತ್ಯ ಸಂಸ್ಕೃತಿಯ ಪ್ರತೀಕದಂತಿತ್ತು. ವಿಜಯನಗರ ಜಿಲ್ಲೆಯ ಕೆ.ರಾಮು ಕಡ್ಡಿರಾಮಪುರ ಮತ್ತು ತಂಡದಿಂದ ಪ್ರದರ್ಶನಗೊಂಡ ಹಗಲುವೇಷ ಎಲ್ಲರ ಮನಸೆಳೆಯಿತು. ವೈಶಿಷ್ಟ್ಯಪೂರ್ಣ ಯಕ್ಷಗಾನದ ವೇಶಭೂಷಣಧಾರಿಗಳಾದ ಸುನೀಲ್ ಮತ್ತು ತಂಡವು ಸಮಾರಂಭದ ಆಕರ್ಷಣೆ ಕೂಡ ಆಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಂಟಿ ಕಾರ್ಯದರ್ಶಿ ಬಲವಂತರಾಯ ಪಾಟೀಲ್, ಬನಶಂಕರಿ ವಿ.ಅಂಗಡಿ ಮತ್ತು ಇಲಾಖೆಯ ಲಕ್ಷ್ಮೀದೇವಿ ಸೇರಿದಂತೆ ಹಲವರು ಭಾಗವಹಿಸಿದ್ದರು.