ಕನ್ನಡಪ್ರಭ ವಾರ್ತೆ ಬೆಂಗಳೂರುಮಧ್ಯ ಕರ್ನಾಟಕದ ಹಳ್ಳಿಗಳನ್ನು ಸುತ್ತಿ ಮಹಿಳಾ ಸಂಘಟನೆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ ‘ಬಳ್ಳಾರಿ ಸಿದ್ದಮ್ಮ’ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರ ತೊಟ್ಟು ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ ರೂಪಕ ನೋಡುಗರ ಮನಸೂರೆಗೊಳಿಸಿದರೆ, ಇನ್ನೂ ಸಮವಸ್ತ್ರ ತೊಟ್ಟ ತಂಡಗಳು ಶಿಸ್ತುಬದ್ಧವಾಗಿ ನಡೆಸಿದ ಕೊಟ್ಟ ಪರೇಡ್ ದೇಶ ಭಕ್ತಿಯನ್ನು ಇಮ್ಮಡಿಗೊಳಿಸಿತ್ತು.
ಇವು ಶುಕ್ರವಾರ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪ್ರಮುಖ ಆಕರ್ಷಣೆಗಳು...ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಧರಿಸಿ, ಕೆನ್ನೆಯ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡ ಚಿಣ್ಣರು ಸಂಭ್ರಮಿಸಿದರು. ವಂದೇ ಮಾತರಂ, ಭಾರಾತ್ ಮಾತಾಕಿ ಜೈ ಘೋಷಣೆಗಳು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಮುಗಿಲು ಮುಟ್ಟಿದ್ದವು.ಬೆಳಗ್ಗೆ 8.45ಕ್ಕೆ ಸರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನದಕ್ಕೆ ಆಗಮಿಸಿ 8.47ಕ್ಕೆ ಧ್ವಜಾರೋಹಣ ನೆರವೇರಿಸಿದರು. 9 ಗಂಟೆಗೆ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 79ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಬಳಿಕ ಪರೇಡ್ ಕಮಾಂಡರ್ ನಾಗರಾಜ್ ಹಾಗೂ ಡೆಪ್ಯುಟಿ ಕಮಾಂಡರ್ ನಿಖಿಲ್ ಕುಮಾರ್ ನೇತೃತ್ವದಲ್ಲಿ ಕೆಎಸ್ಆರ್‌ಪಿ, ಬಿಎಸ್ಎಫ್, ಶ್ವಾನದಳ, ಸಿವಿಲ್ ಡಿಫೆನ್ಸ್ ಸೇರಿದಂತೆ ವಿವಿಧ ಇಲಾಖೆಯ 35ಕ್ಕೂ ಅಧಿಕ ತುಕಡಿಗಳಿಂದ ಪಥ ಸಂಚಲನ ನಡೆಯಿತು.ದಿಟ್ಟ ಮಹಿಳೆ ಬಳ್ಳಾರಿ ಸಿದ್ದಮ್ಮ:
ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಧೈರ್ಯಶಾಲಿ ಮಹಿಳೆಯರು ಇತಿಹಾಸದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ರಾಣಿ ಅಬ್ಬಕ್ಕದೇವಿಯಿಂದ ಕಿತ್ತೂರಿನ ಚೆನ್ನಮ್ಮ, ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ಇಕ್ಕೇರಿಯ ರಾಣಿ ಚನ್ನಮ್ಮಾಜಿ ರೀತಿಯಲ್ಲಿ ಬಳ್ಳಾರಿ ಸಿದ್ದಮ್ಮ ಸಹ ತಮ್ಮದೇ ಕೊಡುಗೆ ನೀಡಿದ್ದಾರೆ.ಜೈಲುವಾಸದಿಂದ ಬಂದ ನಂತರ ಸಿದ್ದಮ್ಮ ಅವರು 1939ರಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಮತ್ತು ಮಾಯಕೊಂಡ ಅರಣ್ಯ ಪ್ರದೇಶಗಳಲ್ಲಿ ಈಚಲು ಮರಗಳನ್ನು ಕಡಿಯುವ ಚಳುವಳಿಯಲ್ಲಿ ಭಾಗವಹಿಸಿ, ಮತ್ತೆ 1 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಾರೆ. ಸಕ್ರಿಯವಾಗಿ ಸ್ವಾತಂತ್ರ್ಯದ ಎಲ್ಲಾ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಸಕ್ರಿಯವಾಗಿ ಸ್ವಾತಂತ್ರ್ಯದ ಎಲ್ಲಾ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಇವರು ಮಹಾತ್ಮ ಗಾಂಧಿಜಿ ಸೇರಿದಂತೆ ಮೊದಲಾದವರಿಂದ ಪ್ರಭಾವಿತರಾಗಿರುತ್ತಾರೆ. ಕಡೆಗಣಿಸಲಾದ ಇಂಥ ವೀರ ಮಹಿಳೆ ಬಳ್ಳಾರಿ ಸಿದ್ದಮ್ಮ ಅವರ ಕುರಿತು ಬಿಬಿಎಂಪಿಯ ಹೇರೋಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ 694 ವಿದ್ಯಾರ್ಥಿಗಳು ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಕನ್ನಡತಿರು’ ಎಂಬ ನೃತ್ಯರೂಪಕ ಪ್ರದರ್ಶಿಸಿದರು.
ಜನ ಮೆಚ್ಚಿದ ಪಂಚ ಗ್ಯಾರಂಟಿ:ಸಾಮಾಜಿಕ ಅಸಮತೋಲನ ನಿವಾರಣೆಗೆ ಜನರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದಾರೆ. ಈ ಕುರಿತು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶೇಷಾದ್ರಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 450 ವಿದ್ಯಾರ್ಥಿಗಳು ಕಲಾ ಪ್ರದರ್ಶನಕ್ಕೂ ಜನ ಮನ್ನಣೆ ದೊರಕಿತು. ಈ ವೇಳೆ ಪಂಚ ಗ್ಯಾರಂಟಿ ಯೋಜನೆಗಳ ಫಲಕಗಳನ್ನು ಪ್ರದರ್ಶಿಸಲಾಯಿತು.
ಸಂಗೀತದ ಅಲೆಯಲ್ಲಿ ತೇಲಿಸಿದ ಪೊಲೀಸ್ ವಾದ್ಯ:ರಾಜ್ಯ ಪೊಲೀಸ್ ವತಿಯಿಂದ ಸಾಮೂಹಿಕ ವಾದ್ಯಮೇಳ ಪ್ರದರ್ಶನ ವಿಶೇಷವಾಗಿತ್ತು. ವಾದ್ಯಗಳ ಮೂಲಕ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ಇದೇನಾಡು ಇದೇ ಬಾಷೆ, ವೈಷ್ಣವ ಜನತೋ, ಜೋಗದ ಸಿರಿ ಬೆಳಕಿನಲ್ಲಿ, ಏ ಮೇರಾವತನ್ ಕೆ ಲೋಗೋ, ರಘುಪತಿ ರಾಘವ ರಾಜರಾಮ್, ಜೈಹೋ ಗೀತಗಾಯನ ನಡೆಸಿಕೊಟ್ಟರು.ಪಥ ಸಂಚಲನದಲ್ಲಿ ಬಹುಮಾನ
ಗ್ರೂಪ್-1 ವಿಭಾಗದಲ್ಲಿ ಬಿಎಸ್ಎಫ್ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಕೆಎಸ್ಆರ್‌ಪಿಎಫ್ (ಪುರುಷ) ತಂಡಕ್ಕೆ ದ್ವಿತೀಯ ಹಾಗೂ ನಗರ ಶಸ್ತ್ರಪಡೆ ತಂಡಕ್ಕೆ ತೃತೀಯ ಬಹುಮಾನ ಪಡೆದಿದೆ. ಕೆಎಸ್‌ಆರ್‌ಪಿ (ಮಹಿಳಾ) ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು.ಇದೇ ಕ್ರಮವಾಗಿ ಗ್ರೂಪ್-2 ವಿಭಾಗದಲ್ಲಿ ಎನ್‌ಸಿಸಿ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ತಂಡ, ಗ್ರೂಪ್-3: ಸಿವಿಲ್ ಡಿಫೆನ್ಸ್, ಟ್ರಾಫಿಕ್ ವಾರ್, ಗ್ರೂಪ್-4: ಅರಕೆರೆ ಮಿತ್ರ ಅಕಾಡೆಮಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಗ್ರೂಪ್-5: ಯಶವಂತಪುರದ ಬಾಪೂ ಹೈಸ್ಕೂಲ್, ನಾಗಶೆಟ್ಟಿಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗ್ರೂಪ್-6: ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆ, ಭಾರತ್ ಸ್ಕೌಟ್ ಅಂಡ್ ಗೈಡ್ಸ್, ಬ್ಯಾಂಡ್ ಗ್ರೂಪ್: ಎನ್‌ಸಿಸಿ ಬ್ಯಾಂಡ್, ಪ್ರೆಸಿಡೆನ್ಸಿ ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಹುಮಾನ ವಿತರಿಸಿದರು. ಈ ವೇಳೆ ರಾಜ್ಯ ಪೊಲೀಸ್ ಇಲಾಖೆಗೆ 50ವರ್ಷ ತುಂಬಿದ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಚಿಟಿ ಬಿಡುಗಡೆ ಮಾಡಿದರು.
ಸ್ವಾತಂತ್ರ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ ಗೋವಾ ರಾಜ್ಯದ ಪೊಲೀಸ್ ತಂಡ, ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಶ್ವಾನದಳ, ಶ್ವಾನದಳ, ಸಮರ್ಥನಂ ಹಾಗೂ ರಮಣಶ್ರೀ ಅಂದ ಮಕ್ಕಳ ತಂಡಕ್ಕೆ ವಿಶೇಷ ಗೌರವ ಪ್ರಶಸ್ತಿ ನೀಡಲಾಯಿತು.ಸಾಂಸ್ಕೃತಿ ವಿಭಾಗದಲ್ಲಿ ಗ್ಯಾರಂಟಿ
ಪ್ರದರ್ಶನಕ್ಕೆ ಪ್ರಥಮ ಬಹುಮಾನಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಕಲಾ ಪ್ರದರ್ಶನ ನೀಡಿದ ಶೇಷಾದ್ರಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 79ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಕನ್ನಡತಿರು’ ನೃತ್ಯರೂಪಕ ಪ್ರದರ್ಶಿಸಿದ ಬಿಬಿಎಂಪಿಯ ಹೇರೋಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಬಹುಮಾನ ಲಭಿಸಿದೆ.
3ನೇ ಬಾರಿ ಗೋವಾಪೊಲೀಸ್ ತಂಡ ಭಾಗಿ
ರಾಜ್ಯದ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಗೋವಾದ ಪೊಲೀಸರ ತಂಡ 3ನೇ ಬಾರಿ ಭಾಗವಹಿಸಿದೆ. ಇದೇ ಮೊದಲ ಬಾರಿ ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.ಸಾಹನ ಪ್ರದರ್ಶನವಿಲ್ಲದೇ ನಿರಾಸೆ
ಸ್ವಾತಂತ್ರ್ಯೋತ್ಸವದಲ್ಲಿ ಮೈನವಿರೇಳಿಸುವ ಮೋಟರ್ ಸೈಕಲ್ ಸಾಹನ ಪ್ರದರ್ಶನ, ಕಮಾಂಡೋಗಳು ಪ್ಯಾರಚ್ಯೂಟ್ ಸೇರಿದಂತೆ ಸೇನೆ ಪಡೆಯ ಕಮಾಂಡೋಗಳಿಂದ ಸಾಹನ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿತ್ತು. ಮಳೆಯಿಂದ ಈ ಬಾರಿ ಆ ರೀತಿ ಯಾವುದೇ ಸಾಹನ ಪ್ರದರ್ಶನ ಆಯೋಜಿಸದಿರುವುದರಿಂದ ಸ್ವಾತಂತ್ರ್ಯೋತ್ಸವ ವೀಕ್ಷಣೆಗೆ ಆಗಮಿಸಿದವರಿಗೆ ಸ್ವಲ್ಪಮಟ್ಟಿಗೆ ನಿರಾಸೆ ಉಂಟಾಯಿತು.ಈ ಬಾರಿಯೂ ಬುಲೆಟ್
ಪ್ರೂಫ್ ತೆಗೆಸಿದ ಸಿಎಂಈ ಬಾರಿಯೂ ವೇದಿಕೆಯ ಪೋಡಿಯಂಗೆ ಆಳವಡಿಸಿದ್ದ ಬುಲೆಟ್ ಪ್ರೂಫ್ ಗಾಜಿನ ಪರದೆಯನ್ನು ತೆಗೆಸಿ ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಶುಕ್ರವಾರ ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ, ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸುವುದಕ್ಕೆ ತೆರಳುವ ಮುನ್ನವೇ ಬುಲೆಟ್ ಪ್ರೂಫ್ ಗಾಜಿನ ಪರದೆ ತೆರವು ಮಾಡುವಂತೆ ಸೂಚಿಸಿದರು. ವಾಪಾಸ್ ಆಗುವುದರಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಯು ಬುಲೆಟ್ ಪ್ರೂಫ್ ಗಾಜಿನ ಪರದೆ ತೆರವು ಮಾಡಿ ಭಾಷಣಕ್ಕೆ ಪೋಡಿಯಂ ಸಿದ್ಧಪಡಿಸಿದ್ದರು.