ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವ
ಭಾರತ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿ ಮುಂದುವರಿದ ರಾಷ್ಟ್ರಗಳ ಸಾಲಲ್ಲಿ ನಿಲ್ಲಲು ಹೋರಾಟಗಾರರ ಬಲಿದಾನ ಮತ್ತು ವಿವಿಧ ನಾಯಕರ ಆಡಳಿತ ಕಾರಣವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶುಕ್ರವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಭಾರತ ಅಲ್ಲದೆ ಇಡೀ ಪ್ರಪಂಚದಲ್ಲಿರುವ ಭಾರತೀಯರಿಗೆ ಸುವರ್ಣ ದಿನ ವಾಗಿದೆ. ಮಹಾತ್ಮ ಗಾಂಧೀಜಿ, ವಲ್ಲಭ ಬಾಯಿ ಪಟೇಲ್, ಲಾಲ ಲಜಪತರಾಯ್, ನೆಹರು, ತಿಲಕ್ ರಂತಹ ನಾಯಕರ ಹೋರಾಟದಿಂದ ದಾಸ್ಯದ ಸಂಕೋಲೆಯಿಂದ 1947ರಲ್ಲಿ ಬಿಡುಗಡೆ ಹೊಂದುವ ಜೊತೆ ಭಾರತ 1956ರ ಜ. 26 ರಂದು ತನ್ನದೇ ಆದ ಸಂವಿಧಾನವನ್ನು ಹೊಂದಿತು. ಆ ಮೂಲಕ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದರು.ಸ್ವಾತಂತ್ರ ಬಂದ 78 ವರ್ಷಗಳಲ್ಲಿ ಭಾರತ ದೇಶವನ್ನಾಳಿದ ವಿವಿಧ ಪಕ್ಷಗಳ ಮುಖಂಡರು ರಾಷ್ಟ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಅಗ್ರ ರಾಷ್ಟ್ರಗಳ ಸಾಲಲ್ಲಿ ನಿಂತಿದೆ. ಹಾಗಾಗಿ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸುಮಾರು 15 ಜನ ಗರ್ಭಿಣಿಯರೂ ತಮ್ಮ ಜೀವ ಬಲಿದಾನ ಮಾಡಿ ಸ್ವಾತಂತ್ರದ ಹೋರಾಟಕ್ಕೆ ಚಾಲನೆ ನೀಡಿರುವುದನ್ನು ನಾವು ಮರೆಯುವಂತಿಲ್ಲ. ನನ್ನ ದೇಶ ನನ್ನ ಹಕ್ಕು ಎಂದು ಹೆಮ್ಮೆ ಪಡಬೇಕು ಎಂದರು.
ಬೀರೂರಿನ ಪತ್ರಕರ್ತ ಸೋಮ ನಾಡಿಗ್ ಸೇರಿದಂತೆ, ಅಂಗನವಾಡಿ ಕಾರ್ಯಕರ್ತೆ, ಕೃಷಿ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಗ್ಯಾರೆಂಟಿಗಳ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್, ವಿವಿಧ ಇಲಾಖೆ ಅಧಿಕಾರಿ ಸಿ. ಆರ್. ಪ್ರವೀಣ್, ಎಂ.ಅಶೋಕ್,ಶಿವಪ್ರಸಾದ್, ಚೈತ್ರಾ,ತುಳಸಿಲಕ್ಷ್ಮೀ, ತಿಮ್ಮಯ್ಯ, ಹರೀಶ್, ಸಪ್ತಕೋಟಿ ಧನಂಜಯ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
15ಕೆಕೆಡಿಯು2ಎ.