ಹೊಸಕೋಟೆ: ಸರ್ವರಿಗೂ ಸಮಾನತೆಯ ಅವಕಾಶ ದಕ್ಕಲೆಂಬ ದೃಷ್ಠಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳಿಗೆ ಬೆಲೆ ಕೊಟ್ಟರೆ ದೇಶದ ಅಭಿವೃದ್ದಿ ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ, ಸ್ವಜನ ಪಕ್ಷಪಾತ, ಆಡಳಿತದ ವ್ಯವಸ್ಥೆ ದಿಕ್ಕು ತಪ್ಪುತ್ತಿರುವ ಪರಿಣಾಮ ದೇಶದ ಅಭಿವೃದ್ಧಿಯೂ ಹಾದಿ ತಪ್ಪುತ್ತಿದೆ. ಕಳೆದ 78 ವರ್ಷದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸರ್ವ ಸಮಾನತೆ ಕಾಣಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ತಾನು ಮಾತ್ರ ಉದ್ಧಾರವಾಗದೇ, ತನ್ನ ದೇಶವೂ ಸಹ ಉದ್ದಾರವಾಗಬೇಕು ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು. ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ. ನಾವು ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.
ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ದೇಶದ ಭದ್ರತೆ ಹಾಗೂ ಅಭಿವೃದ್ಧಿಗಾಗಿ ನಾವೆಲ್ಲರು ಶ್ರಮಿಸಬೇಕಾಗಿದೆ. ಯುವಶಕ್ತಿ ದೇಶಭಕ್ತಿಯನ್ನು ಬೆಳೆಸಿಕೊಂಡು ದುಡಿಯುವ ಮೂಲಕ ಹಿರಿಯರು ನಮಗೆ ನೀಡಿರುವ ಸ್ವಾತಂತ್ರ‍್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ. ಬ್ರಿಟೀಷರ ಸಂಕೋಲೆಯಿಂದ ದೇಶಕ್ಕೆ ಸ್ವಾತಂತ್ರ ಕೊಡಿಸುವಲ್ಲಿ ಅನೇಕ ಹೋರಾಟಗಾರರು ತ್ಯಾಗ ಬಲಿದಾನ ಮಾಡಿದ್ದಾರೆ. ಅವರೆಲ್ಲರ ನಿರಂತರ ಸ್ಮರಣೆ ಅಗತ್ಯ ಎಂದು ಹೇಳಿದರು.ನಗರಸಭಾಧ್ಯಕ್ಷೆ ಆಶಾ ರಾಜಶೇಖರ್, ಬಿಇಒ ಪದ್ಮನಾಭ್, ಡಿವೈಎಸ್ಪಿ ಮಲ್ಲೇಶ್, ಬಿಎಂಆರ್‌ಡಿ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಎಚ್.ಎಂ.ಸುಬ್ಬರಾಜ್ ಸೇರಿದಂತೆ ಹಲ ಗಣ್ಯರು ಹಾಜರಿದ್ದರು.
ಫೋಟೋ: 15 ಹೆಚ್‌ಎಸ್‌ಕೆ 1ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಗೌರವ ವಂದನೆ ಸ್ವೀಕರಿಸಿದರು.