- ಬೆಳವಾಡಿ ಕೆರೆಗೆ ಬಾಗಿನ ಅರ್ಪಣೆ । 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕೇಂದ್ರ-ರಾಜ್ಯದ ಅನುಮತಿ ಕೋರಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನರಲ್ಲಿ ಆರ್ಥಿಕ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಈ ಯೋಜನೆ ಅನುಕೂಲವಾಗಿದೆ ಎಂದು ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ಚಿಕ್ಕಮಗಳೂರು ಕ್ಷೇತ್ರದ ಬೆಳವಾಡಿ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದು, ಅವರನ್ನು ಆರ್ಥಿಕ ಸಬಲರಾಗಿ ಮಾಡಿದರೆ ಇಡೀ ಕುಟುಂಬಕ್ಕೆ ಬಲ ಬಂದಂತಾಗಲಿದೆ. ಯುವಕರಿಗೆ ಯುವನಿಧಿ, 1.60 ಕೋಟಿ ಜನರಿಗೆ 200 ಯೂನಿಟ್‌ಗಳಷ್ಟು ಉಚಿತ ವಿದ್ಯುತ್ ನೀಡುವ ವ್ಯವಸ್ಥೆ, ಅಂತೆಯೇ ಮಹಿಳೆಯರಿಗೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ, ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುವ ₹2 ಸಾವಿರ ಸರಾಸರಿ ಪರಿಗಣಿಸಿದರೆ ಒಂದು ಕುಟುಂಬಕ್ಕೆ ₹5 ಸಾವಿರ ದೊರೆತಂತಾಗುತ್ತಿದೆ ಎಂದರು.ವಿದ್ಯುತ್ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಸೋಲಾರ್ ವ್ಯವಸ್ಥೆ ಹೆಚ್ಚು ಮಾಡಲು ಯೋಜನೆ ರೂಪಿಸಲಾಗಿದೆ. ಜೊತೆಗೆ ಶರಾವತಿ ಪಂಪ್ ಸ್ಟೋರೇಜ್ ನೀರು ಬಳಸಿ 2 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯದ ಅನುಮತಿ ಕೋರಲಾಗಿದೆ. ಪಾವಗಡದಲ್ಲಿ ಇನ್ನೂ 2 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿದ್ದೇವೆ. ಇದಕ್ಕೆ ರೈತರಿಂದ ಗುತ್ತಿಗೆ ಪಡೆದ ಭೂಮಿಗೆ ಸರ್ಕಾರ ಪ್ರತೀ ತಿಂಗಳು ಹಣ ಪಾವತಿಸುತ್ತಿದೆ. ಕುಸುಮ್-ಸಿ ಯೋಜನೆಯಡಿ 2,500 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಸಂಬಂಧ ಖಾಸಗಿಯವರು ಬಂಡವಾಳ ಹೂಡಲಿದ್ದು, ಅವರಿಂದ 2 ಅಥವಾ 2.10 ರು. ಗಳಿಗೆ ಕೊಡಲು ಮುಂದೆ ಬಂದಿದ್ದಾರೆ. ಸುಮಾರು ₹10 ಸಾವಿರ ಕೋಟಿ ಬಂಡವಾಳ ಹೂಡುವ ಅವಶ್ಯಕತೆ ಇದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಡೆಗಳಲ್ಲಿ ಕೊಳವೆ ಬಾವಿಗಳಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಬೆಳವಾಡಿ ಸುತ್ತಮುತ್ತ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಳೆದ 25 ವರ್ಷಗಳಿಂದೀಚೆಗೆ ದೇವನೂರು ಕೆರೆ ಮಳೆಯಿಂದ ಮಾತ್ರ ಒಮ್ಮೆ ತುಂಬಿತ್ತು. ಬಹುಶಃ ಇದೊಂದು ತೆಂಗು ಹಾಗೂ ಅಡಕೆ ನಾಡಾಗಿತ್ತು. ಬರಗಾಲ ಬಂದು ಈ ಎರಡು ಕೆರೆಗೆ ನೀರಿಲ್ಲದೆ ಬರಡಾಯಿತು. ಬಹುಶಃ ಬೆಳವಾಡಿ, ದೇವನೂರಿನಂತಹ ದೊಡ್ಡ ಗ್ರಾಮಗಳಿಂದ ಜನರು ಬೆಂಗಳೂರಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಕಾಲದಲ್ಲಿ ನೀರು ಮತ್ತು ವಿದ್ಯುತ್ ದೊರಕಿದರೆ ಇಲ್ಲಿನ ರೈತರು ಉತ್ತಮ ಬೆಳೆ ಬೆಳೆದು ಬೆಲೆ ಸಿಕ್ಕಿದ್ದಲ್ಲಿ ಅವರೆಲ್ಲಾ ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ಅನೇಕ ರೈತ ಮುಖಂಡರು ಈ ಕೆರೆ ತುಂಬಿಸಲು ಪ್ರಯತ್ನಿಸಿದ್ದರು ಎಂದರು.ಈ ಹಿಂದೆ ಮಲ್ಲಿಕಾರ್ಜುನ ಪ್ರಸನ್ನ ಅವರು ಸಣ್ಣ ನೀರಾವರಿ ಸಚಿವರಾದ ಬಳಿಕ ಜನಪ್ರತಿನಿಧಿಗಳಾಗಿದ್ದ ಕೆ.ಬಿ. ಮಲ್ಲಿ ಕಾರ್ಜುನ್, ಧರ್ಮೇಗೌಡರು, ಸಿ.ಟಿ.ರವಿ ಕರಗಡ ಯೋಜನೆಗೆ ಶ್ರಮಪಟ್ಟಿದ್ದಾರೆ. ಆದರೆ ಕರಗಡ ಯೋಜನೆ ಕಳಸಾಪುರ ಮತ್ತು ಈಶ್ವರಹಳ್ಳಿ ಕೆರೆಗಳನ್ನು ಮಾತ್ರ ತುಂಬಲು ಶಕ್ತವಾಗಿದೆ. ಈ ಕೆರೆಗಳಿಗೆ ನೀರು ತುಂಬಿಸಲು ರಣಘಟ್ಟ ಯೋಜನೆ, ಭದ್ರಾ ಉಪ ಕಣಿವೆ ಯೋಜನೆ ಇದ್ದರೂ ಈ ಯೋಜನೆಗಳು ಕೈಗೂಡುವವರೆಗೆ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವ ಜಾರ್ಜ್ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಮಾಡಿದ ಫಲವಾಗಿ ಎತ್ತಿನಹೊಳೆ ನೀರು ಇಲ್ಲಿವರೆಗೆ ಹರಿದು ಬಂದಿದೆ. ಆದರೆ ಮುಂದೆ ರಣಘಟ್ಟ ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಮುಖಂಡರಾದ ಎಚ್.ಪಿ.ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಬಸವರಾಜ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. 15 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆಗೆ ಶುಕ್ರವಾರ ಬಾಗಿನ ಅರ್ಪಣೆ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಶಾಸಕ ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ರೇಖಾ ಹುಲಿಯಪ್ಪಗೌಡ ಇದ್ದರು.