ಮಾಗಡಿ: ತಾಲೂಕಿನ ಸಮಗ್ರ ಅಬೀವೃದ್ಧಿಗೆ ಬದ್ಧರಾಗಿದ್ದು ಹಲವು ಯೋಜನೆಗಳಿಗೆ ಶೀಘ್ರದಲ್ಲೆ ಚಾಲನೆ ನೀಡಲಾಗುತ್ತದ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ತಾಲೂಕು ಆಡಳಿತ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಇದರ ಜೊತೆಗೆ ತಾಯಿ-ಮಗು ಆಸ್ಪತ್ರೆ ಕೂಡ ನಿರ್ಮಾಣ ಮಾಡಲು ಅನುಮತಿ ಪಡೆದುಕೊಳ್ಳಲಾಗುವುದು. ಕುದುರು ಮತ್ತು ತಿಪ್ಪಸಂದ್ರದಲ್ಲಿ ಆರೋಗ್ಯ ಸೌಧ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ತಲುಪಿಸಲಾಗುವುದು. 15 ದಿನಕ್ಕೊಮ್ಮೆ ಹೋಬಳಿ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಬಡವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲೂ ತಾಲೂಕು ಮುಂಚೂಣಿಯಲ್ಲಿದ್ದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗೆ ಹೆಚ್ಚಿನ ಹೊತ್ತನ್ನು ಕೊಡಲಾಗಿದ್ದು ₹ 10 ಲಕ್ಷ ವೆಚ್ಚದಲ್ಲಿ ಕುದುರು ಪಟ್ಟಣದಲ್ಲಿ ಟೊಯೋಟಾ ವತಿಯಿಂದ ಹೈಟೆಕ್ ಶಾಲೆ ನಿರ್ಮಾಣವಾಗುತ್ತಿದೆ. ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಿದ್ದೇವೆ. ಪಟ್ಟಣದ ಜೂನಿಯರ್ ಕಾಲೇಜನಲ್ಲಿ ಕೆಪಿಎಸ್ ಶಾಲೆ ಆರಂಭಿಸಿ ಒಂದರಿಂದ 12ನೇ ತರಗತಿವರೆಗೂ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗುತ್ತದೆ. ಹೋಬಳಿಗೊಂದು ಕೆಪಿಎಸ್ ಶಾಲೆ ಆರಂಭಿಸುವ ಚಿಂತನೆ ಮಾಡಲಾಗಿದ್ದು ಬಿಡದಿಯಲ್ಲೂ ಕೂಡ ಶಾಲೆ ಆರಂಭಿಸುತ್ತಿದ್ದು ಮಾತೃಭಾಷೆಗೆ ಗೌರವಿಸುವ ಜೊತೆಗೆ ಇಂಗ್ಲಿಷ್ ಭಾಷೆ ಕಲಿಸಲಾಗುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.ನುಡಿದಂತೆ ಅಭಿವೃದ್ಧಿ ಮಾಡಿ ತೋರಿಸುವೆ:
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನುಡಿದಂತೆ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಅರ್ಪಿಸುತ್ತೇವೆ. ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣ ₹7 ಕೋಟಿ ಹಾಗೂ ಕುದುರಿನಲ್ಲೂ ₹4 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುತ್ತದೆ. ಒಂದು ಸಾವಿರ ಮಕ್ಕಳು ಕೂರುವ ಆಡಿಟೋರಿಯಂ ನಿರ್ಮಾಣ ₹ 16 ಕೋಟಿ ವೆಚ್ಚದಲ್ಲಿ ಜೂನಿಯರ್ ಕಾಲೇಜು ಬಳಿ ನಿರ್ಮಾಣ ಮಾಡಲಾಗುತ್ತದೆ. ₹ 5 ಕೋಟಿ ವೆಚ್ಚದಲ್ಲಿ ಶಿಕ್ಷಕರ ಭವನ, ಹೊಸ ಬಿಇಒ ಕಚೇರಿ, ಅಂಬೇಡ್ಕರ್ ಭವನ ನಿರ್ಮಿಸಲಾಗುವುದು ಎಂದರು.ಮುಂದಿನ ತಿಂಗಳು ಶ್ರೀರಂಗ ಏತ ನೀರಾವರಿ ಯೋಜನೆಗೆ ಚಾಲನೆ, ಸತ್ತೆಗಾಲದಿಂದ ವೈಜಿಗುಡ್ಡ ಮತ್ತು ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿ ಇದ್ದು ಎತ್ತಿನ ಹೊಳೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸಿ ಮಂಚನಬೆಲೆ ಜಲಾಶಯಕ್ಕೂ ನೀರು ತರುತ್ತಿದ್ದು ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ಉತ್ತಮ ಪತ ಸಂಚಲನ ನಡೆಸಿದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮದ ರೂವಾರಿ ಶಿಕ್ಷಕ ಚಿಕ್ಕವೀರಯ್ಯನವರಿಗೆ ತಾಲೂಕು ಆಡಳಿತ ವತಿಯಿಂದ ಸ್ವತಂತ್ರೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ತಹಸೀಲ್ದಾರ್ ಶರತ್ ಕುಮಾರ್ ನೆರವೇರಿಸಿದರು. ಪುರಸಭಾಧ್ಯಕ್ಷ ರಮ್ಯಾ ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ರಹಮತ್, ಹೇಮಲತಾ, ಭಾಗ್ಯಮ್ಮ, ಅಶ್ವಥ್, ಅನಿಲ್ ಕುಮಾರ್, ಬಿಇಒ ಚಂದ್ರಶೇಖರ್, ಇಒ ಜೈಪಾಲ್, ಕಾಸಪ ಅಧ್ಯಕ್ಷ ತಿ.ನಾ.ಪದ್ಮನಾಭ್, ಪೊಲೀಸ್ ಇನ್ಸ್ಪೆಕ್ಟರ್ ಗಿರಿರಾಜ್, ಟಿಎಪಿಸಿಎಂಎಸ್ ಅಧ್ಯಕ್ ಶಿವಪ್ರಸಾದ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಂ ಇತರರು ಭಾಗವಹಿಸಿದ್ದರು.