ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಸಂಗಾಪೂರದ ಶ್ರೀರಂಗದೇವರಾಯನಗರ ಸರ್ಕಾರಿ ಶಾಲೆಯಲ್ಲಿ ಕಳೆದ ತಿಂಗಳು ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆ ಹಿನ್ನೆಲೆ ಅಮಾನತುಗೊಳಿಸಿರುವ ಮುಖ್ಯಶಿಕ್ಷಕಿ ಹಾಗೂ ಸಹ ಶಿಕ್ಷಕರನ್ನು ಪುನಃ ಸೇವೆಗೆ ಸೇರಿಸಿಕೊಂಡು ಅದೇ ಶಾಲೆಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವುದಾಗಿ ಶಾಲೆಯ ಎದುರು ಪಾಲಕರು ಪ್ರತಿಭಟನೆ ನಡೆಸಿ ಬಿಇಒ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಹಂಪೇಶ ಅರಿಗೋಲು ಮಾತನಾಡಿ, ಬಿಸಿಯೂಟ ಸೇವಿಸಿ ಕೆಲ ಮಕ್ಕಳು ಅಸ್ವಸ್ಥಗೊಂಡ ನಂತರ ಒಂದೆರಡು ಗಂಟೆಗಳಲ್ಲೇ ಚೇತರಿಸಿಕೊಂಡು ಆರೋಗ್ಯ ಪೂರ್ಣರಾಗಿ ಮನೆಗೆ ಮರಳಿರುತ್ತಾರೆ. ಆದರೆ ಅಂದು ಕೆಲವರು ವಿನಾಕಾರಣ ಗಲಾಟೆ ಮಾಡಿ ಆತಂಕ ಸೃಷ್ಟಿಸಿದ್ದು, ಆದರೆ ನಿಜವಾದ ಕಾರಣ ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ ಬಿಸಿಲಿನಲ್ಲಿ ಆಟವಾಡಿದ್ದು, ಹೆಚ್ಚು ಬಿಸಿಲಿನ ತಾಪದಿಂದ ಅಸ್ವಸ್ಥರಾಗಿದ್ದಾರೆ, ಹೊರೆತು ಬೇರೆ ಯಾವುದೇ ಕಾರಣಗಳಿಂದಲ್ಲ. ಲಘು ಚಿಕಿತ್ಸೆಯೊಂದಿಗೆ ನಮ್ಮ ಮಕ್ಕಳು ಆರೋಗ್ಯ ಪೂರ್ಣರಾಗಿ ಮನೆಗೆ ಮರಳಿದ್ದಾರೆ. ಆದರೆ 2-3 ದಿನಗಳ ನಂತರ ಮುಖ್ಯ ಶಿಕ್ಷಕಿ ಪುಷ್ಪಾವತಿ ಇವರನ್ನು ಹಾಗೂ ಸಹ ಶಿಕ್ಷಕ ಶರಣಪ್ಪ ಅಮಾನತು ಮಾಡಿರುವುದು ಸರಿಯಲ್ಲ. ಇಬ್ಬರೂ ಶಿಕ್ಷಕರು ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಬೋಧನೆ ಸಂಸ್ಕಾರ ನೀಡುತ್ತಿದ್ದು, ಸರ್ಕಾರ ಕೂಡಲೇ ಅಮಾನತು ವಾಪಸ್ ಪಡೆದು ಇದೇ ಶಾಲೆಯಲ್ಲಿ ಮುಂದುವರಿಸಬೇಕು.
ಈಗಾಗಲೇ ಅಮಾನತು ರದ್ದುಗೊಳಿಸುವಂತೆ ಮೇಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ವ್ಯರ್ಥವಾದ ಕಾರಣ ಈಗ ಶಾಲಾ ಮಕ್ಕಳು ಮತ್ತು ಪಾಲಕರು ಸೇರಿಕೊಂಡು ಮಕ್ಕಳು ಬರಗಾಲದ ಬಿಸಿಯೂಟವನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮೂಲಕ ಧರಣಿ ಸತ್ಯಾಗ್ರಹ ನಡೆಸಲು ಗ್ರಾಮಸ್ಥರೆಲ್ಲ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾ ಸಂಚಾಲಕ ನಾಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಪೀರಪ್ಪ ನಾಯ್ಕ, ಶಂಕರ್ ನಾಗ್, ಹನುಮಂತ ಜಾವಣ್ಣ, ಬಸವರಾಜ್ ನಾಯ್ಕ ಹಾಗೂ ವಿದ್ಯಾರ್ಥಿಗಳು, ಪಾಲಕರಿದ್ದರು.ಅಮಾನತುಗೊಂಡ ಶಿಕ್ಷಕರ ಸ್ಥಳ ನಿಯುಕ್ತಿಗೆ ಮನವಿ:ಸಾರ್ವಜನಿಕರ ದೂರು ಮತ್ತು ಕರ್ತವ್ಯಲೋಪದಡಿ ಅಮಾನತುಗೊಂಡ ಶಿಕ್ಷಕರ ಅಮಾನತು ತೆರವುಗೊಳಿಸಿ, ಸ್ಥಳ ನಿಯುಕ್ತಿಗೊಳಿಸಲು ಮಾರ್ಗದರ್ಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಶ್ರೀಶೈಲ ಬಿರಾದಾರ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.ಸಾರ್ವಜನಿಕರ ದೂರು ಮತ್ತು ಕರ್ತವ್ಯ ಲೋಪದಡಿಯಲ್ಲಿ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಭಟ್ ಅವರನ್ನು ಡಿಸೆಂಬರ್ 21, 2023ರಂದು ಹಾಗೂ ಗಂಗಾವತಿ ತಾಲೂಕಿನ ಸಂಗಾಪುರದ ಶ್ರೀರಂಗದೇವರಾಯಲು ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಪುಷ್ಪಾವತಿ ಎನ್. ಮತ್ತು ಸಹಶಿಕ್ಷಕ ಶರಣಬಸವರಾಜ ಅವರನ್ನು ಏಪ್ರಿಲ್ 4, 2024ರಂದು ಅಮಾನತು ಮಾಡಲಾಗಿತ್ತು. ಶಿಕ್ಷಕರ ಅಮಾನತು ತೆರವುಗೊಳಿಸಿ, ಸ್ಥಳ ನಿಯುಕ್ತಿಗೊಳಿಸುವ ಕುರಿತು ಅನುಮತಿ ಹಾಗೂ ಮಾರ್ಗದರ್ಶನ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದು, ಆಯುಕ್ತರಿಂದ 2-3 ದಿನಗಳಲ್ಲಿ ಅನುಮತಿ ಬರುವುದು. ಅನುಮತಿ ಬಂದ ಕೂಡಲೇ ಶಿಕ್ಷಕರ ಅಮಾನತು ತೆರವುಗೊಳಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.