ಹುಬ್ಬಳ್ಳಿ:
ನಗರದ ಹೊಸೂರು ನ್ಯಾಯಾಲಯದ ಎದುರು ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ವಕೀಲರು, ಬಳಿಕ ನ್ಯಾಯಾಲಯದಿಂದ ಮಹಿಳಾ ವಿದ್ಯಾಪೀಠ ವೃತ್ತದ ವರೆಗೆ ಪಾದಯಾತ್ರೆ ನಡೆಸಿದರು. ವೃತ್ತದಲ್ಲಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಹೊತ್ತು ರಸ್ತೆ ತಡೆ ನಡೆಸಿದ ವಕೀಲರು, ಪೊಲೀಸ್ ಆಯುಕ್ತರ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ವಕೀಲ ಸಣ್ಣಕ್ಕಿ ವೆಂಕಟರವಣಪ್ಪ ಅವರ ಮೇಲಿನ ಹಲ್ಲೆಯಿಂದ ತೀವ್ರ ಗಾಯಗಳಾಗಿದ್ದು, ವಕೀಲರ ಸಮುದಾಯದಲ್ಲಿ ಆತಂಕ ಮೂಡಿಸಿದೆ. ವಕೀಲರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಜಿ. ಮಟ್ಟಿ, ಎಂ.ಎಂ. ಹಳ್ಳಿ, ಉಪಾಧ್ಯಕ್ಷ ದುಂಡರೆಡ್ಡಿ ಎಸ್.ವೈ., ಶಿವು ಅರಗಂಜಿ, ಸಂತೋಷ ರಡ್ಡಿ, ಕೆ.ಎಂ. ಲೋಕೇಶ, ಸವಿತಾ ಪಾಟೀಲ, ಆಶಾ ಕೊಪ್ಪರ, ಕೆ.ಎಸ್. ಬೀಳಗಿ, ಉದಯ ಇಟಗಿ, ಪಿ.ಎಸ್. ನರೇಗಲ್ಲ, ಬಿ.ಡಿ. ಹೆಗಡೆ, ಆರ್.ಜಿ. ಕೊಡ್ಲಿ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಪಾಲ್ಗೊಂಡಿದ್ದರು.