ಹುಬ್ಬಳ್ಳಿ:
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಂಕ್ ಲೈನ್‌ಗೆ ಚಾಲನೆ ದೊರೆತ ಬಳಿಕ ಬೆಂಗಳೂರಿನಲ್ಲಿ ಮೆಟ್ರೋ ಜಾಲ 103 ಕಿಮೀ ವಿಸ್ತರಣೆ ಆಗಲಿದೆ. ದೆಹಲಿ ಬಳಿಕ ಬೆಂಗಳೂರು ಮೆಟ್ರೋ ಜಾಲದಲ್ಲಿ ಎರಡನೇ ಸ್ಥಾನದಲ್ಲಿ ಎಂದು ಹೇಳಿದರು.
ವಿವಿಧ ಕಾಮಗಾರಿಗೆ ಚಾಲನೆ:ಪ್ರಧಾನಿ ಅವರು ತಾವರೆಕೆರೆ ನಿಲ್ದಾಣದಲ್ಲಿ ಮೆಟ್ರೋಗೆ ಚಾಲನೆ ನೀಡಿ ಐಐಎಂ ಬೆಂಗಳೂರು ನಿಲ್ದಾಣದ ವರೆಗೆ ಸಂಚರಿಸುವರು. ಬಳಿಕ ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.2014ರಲ್ಲಿ 7 ಕಿಮೀ ಇದ್ದ ಮೆಟ್ರೋ ಜಾಲ 12 ವರ್ಷಗಳಲ್ಲಿ 103 ಕಿಮೀಗೆ ವಿಸ್ತರಣೆಯಾಗಿದೆ. ಪಿಂಕ್ ಲೈನ್‌ನ ಬಹುತೇಕ ನಿಲ್ದಾಣಗಳು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿವೆ. ಈ ಮಾರ್ಗ ಸಂಚಾರ ದಟ್ಟಣೆ ತಗ್ಗಿಸಲು ನೆರವಾಗಲಿದೆ ಎಂದರು.
ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ತಲಾ ಶೇ. 50ರಷ್ಟಿದೆ. ಅನುಮೋದನೆ, ಬಂಡವಾಳ ಹೂಡಿಕೆ ಹಾಗೂ ವಿದೇಶಿ ಸಾಲಕ್ಕೆ ಖಾತರಿ ಕೇಂದ್ರ ಸರ್ಕಾರದ ಜವಾಬ್ದಾರಿಯಾದರೆ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ರಾಜ್ಯದ ಹೊಣೆ. ಹೀಗಾಗಿ ಕಾಮಗಾರಿ ವಿಳಂಬ, ನಿರ್ವಹಣಾ ಲೋಪ ಹಾಗೂ ದರ ಏರಿಕೆಗೆ ರಾಜ್ಯವೇ ಹೊಣೆ ಹೊರಬೇಕು. ತನ್ನ ವೈಫಲ್ಯವನ್ನು ಕೇಂದ್ರದ ಮೇಲೆ ಹೊರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಬೆಂಗಳೂರು-ಮುಂಬೈ ನಡುವೆ ಯಾದಗಿರಿ, ಕಲಬುರಗಿ ಮಾರ್ಗವಾಗಿ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗಿದ್ದು, ಮುಂದಿನ 3-4 ತಿಂಗಳಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸುವ ಭರವಸೆಯೂ ಇದೆ. ಬೆಂಗಳೂರು-ಪುಣೆ ಬುಲೆಟ್ ರೈಲು ಕಾರಿಡಾರ್‌ನ್ನು ಹುಬ್ಬಳ್ಳಿ ಮಾರ್ಗವಾಗಿ ರೂಪಿಸುವ ಪ್ರಸ್ತಾಪವೂ ಇದೆ ಎಂದು ತೇಜಸ್ವಿ ಸೂರ್ಯ ಪ್ರಶ್ನೆಯೊಂದಕ್ಕೆ ತಿಳಿಸಿದರು.