ಕಸಾಪಗೆ ಅಸಮರ್ಥ ಅಧ್ಯಕ್ಷರು । ಜಗಳೂರಿನ ಕವಿ, ಸಾಹಿತಿ, ಲೇಖಕರ ಕಡೆಗಣನೆಗೆ ತೀವ್ರ ಆಕ್ರೋಶ
ಜಗಳೂರಿನಲ್ಲಿ ಜ.11 ಮತ್ತು 12ರಂದು ನಡೆಯುವ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನೂ ಉಲ್ಲಂಘಿಸಿ, ಕೆಲವೇ ಕೆಲವರ ಸ್ವಹಿತಾಸಕ್ತಿಗಾಗಿ ಸಮ್ಮೇಳನ ನಡೆಸಲು ಹೊರಟ ಹಿನ್ನೆಲೆಯಲ್ಲಿ ಸಮ್ಮೇಳನವನ್ನೇ ಬಹಿಷ್ಕರಿಸಲಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯ, ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಜಗಳೂರು ತಾಲೂಕಿನ ಸ್ಥಳೀಯ ಸಾಹಿತಿಗಳನ್ನೇ ಕಡೆಗಣಿಸಿದ್ದು, ಎಲ್ಲಾ ಸಾಹಿತ್ಯಿಕ ಮಾನದಂಡಗಳನ್ನು ಕಡೆಗಣಿಸಿ, ಕೆಲವರ ಸ್ವಹಿತಾಸಕ್ತಿಗಾಗಿ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿದರು.ಅಸಮರ್ಥರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದರೆ ಏನಾಗಬೇಕೋ ಅದೇ ಆಗುತ್ತದೆಂಬುದಕ್ಕೆ ಜಗಳೂರಿನ ಸಮ್ಮೇಳನ ಸಾಕ್ಷಿಯಾಗುತ್ತಿದೆ. ಪರಿಷತ್ ಅಧ್ಯಕ್ಷರ ಅಸಮರ್ಥತೆಗೆ ಪೂರಕವಾಗಿ ರಾಜಕೀಯ ಪುಡಾರಿತನ ಮೇಲುಗೈ ಪಡೆಯುತ್ತಿದೆ. ಇದು ಖಂಡಿತವಾಗಿಯೂ ಸಾಹಿತ್ಯ ಸಮಾವೇಶವಾಗಿರುವುದಿಲ್ಲ. ತಮ್ಮ ಮಾತಿಗೆ ಇಂಬು ನೀಡುವಂತೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲೇ ಇದೆಲ್ಲವೂ ಬಿಂಬಿತವಾಗಿದೆ. ಈಗಾಗಲೇ 2-3 ಸಲ ಆಹ್ವಾನ ಪತ್ರ ಬದಲಾವಣೆ ಮಾಡಿದ್ದರೂ ಏನೂ ಉಪಯೋಗವಾಗಿಲ್ಲ ಎಂದು ದೂರಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪನವರೇ ಮುಂಚೂಣಿಯಲ್ಲಿ ನಿಂತು, ವಿಶೇಷ ಜವಾಬ್ಧಾರಿ ವಹಿಸಿಕೊಂಡು ಲಕ್ಷ ಲಕ್ಷ ರು.ಗಳನ್ನು ವೆಚ್ಚ ಮಾಡಿ, ಸಮ್ಮೇಳನದ ಜೊತೆಗೆ ಜಲೋತ್ಸವವನ್ನೂ ಪೋಣಿಸಿ ಮಾಡುತ್ತಿರುವ ಈ ಜಾತ್ರೆಯಲ್ಲಿ ಜಗಳೂರು ತಾಲೂಕಿನ ಸ್ವಾಭಿಮಾನವನ್ನು ಜಾಣ್ಮೆಯಿಂದ ಮರೆತಿದ್ದು ಮಾತ್ರ ಖಂಡನೀಯ. ಜಿಲ್ಲೆಯಲ್ಲಿ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಹೆಸರು ಮಾಡಿದ ಹಿರಿಯ ಸಾಹಿತಿಗಳು, ಲೇಖಕರು, ವಿಮರ್ಶಕರು, ಅಂಕಣಕಾರನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಿ, ಅನ್ಯ ಜಿಲ್ಲೆಯವರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿದರು.
ಸಾಹಿತ್ಯ ಸಮ್ಮೇಳನಗಳು ಇದೇ ರೀತಿ ನಡೆದರೆ ರಾಜಕೀಯ ಪುಡಾರಿತನ ಸಮಾವೇಶಕ್ಕೂ, ಇಂತಹ ಸಾಹಿತ್ಯ ಸಮಾವೇಶಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇಂತಹ ಬೆಳವಣಿಗೆ, ಪರಂಪರೆಯನ್ನು ಖಂಡಿಸುತ್ತೇವೆ ಎಂದರು.