ಶ್ರೀರಾಮಮಂದಿರ ಕಾರ್ಯಕ್ರಮ ಬಹಿಷ್ಕರಿಸಿ, ಕಾಂಗ್ರೆಸ್‌ನವರು ಭಾರತದ ಹಿಂದೂಗಳನ್ನು ಅವಮಾನಿಸಿದ್ದಾರೆ: ಶ್ರೀರಾಮುಲು

KannadaprabhaNewsNetwork |  
Published : Jan 12, 2024, 01:46 AM IST
11ಎಚ್‌ಪಿಟಿ1- ಹೊಸಪೇಟೆಯ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು. ಮುಖಂಡರಾದ ಕಾಸಟ್ಟಿ ಉಮಾಪತಿ, ಸಾಲಿಸಿದ್ದಯ್ಯಸ್ವಾಮಿ, ದೇವರಮನಿ ಶ್ರೀನಿವಾಸ್‌, ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಹನುಮಂತಪ್ಪ ಬುಜ್ಜಿ ಮತ್ತಿತರರಿದ್ದರು. | Kannada Prabha

ಸಾರಾಂಶ

ಸೋಮನಾಥ ದೇವಾಲಯದ ಉದ್ಘಾಟನೆ ವೇಳೆಯೂ ಕಾಂಗ್ರೆಸ್ ಬಹಿಷ್ಕಾರ ಮಾಡಿತ್ತು. ಈಗ ಶ್ರೀರಾಮಮಂದಿರ ಉದ್ಘಾಟನೆ ವೇಳೆಯೂ ಇದೇ ನಿಲುವು ತಾಳಿದೆ.

ಹೊಸಪೇಟೆ:

ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್ಸಿನವರು ಬಹಿಷ್ಕಾರ ಮಾಡಿ ಇಡೀ ಭಾರತದ ಹಿಂದೂಗಳನ್ನು ಅವಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ದೂರಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಬಾಬರ್ ಮೇಲೆ ಬಲು ಪ್ರೀತಿ ಇದೆ. ಹಿಂದೂಗಳ ಆರಾಧ್ಯ ದೈವ ರಾಮನ ಮೇಲೆ ಪ್ರೀತಿ ಇಲ್ಲ. ಶ್ರೀರಾಮ ಮಂದಿರ ಧ್ವಂಸ ಮಾಡಿದ ಬಾಬರ್‌ನ ಸಮಾಧಿಗೆ ಕಾಂಗ್ರೆಸ್‌ನವರು ಭೇಟಿ ನೀಡುತ್ತಾರೆ. ಆದರೆ, ಶ್ರೀರಾಮಮಂದಿರ ಉದ್ಘಾಟನೆಗೆ ಬರುತ್ತಿಲ್ಲ. ಇವರು ಯಾವತ್ತಿದ್ದರೂ ಡೋಂಗಿ ಜಾತ್ಯತೀತವಾದಿಗಳು. ಜಾತ್ಯತೀತತೆಯ ಮೇಲೆ ರಾಜಕಾರಣ ಮಾಡುತ್ತಾ ಈಗ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊಘಲ್‌ ದೊರೆ ಬಾಬರ್‌ನ ಮೇಲೆ ಪ್ರೀತಿ ಇರುವುದರಿಂದಲೇ 1952ರ ಸೆಪ್ಟೆಂಬರ್‌ನಲ್ಲಿ ಪಂಡಿತ ಜವಾಹರ್‌ ಲಾಲ್‌ ನೆಹರು ಬಾಬರ್‌ ಸಮಾಧಿಗೆ ಭೇಟಿ ನೀಡಿದ್ದರು. ಬಳಿಕ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್‌ ಸಿಂಗ್ ಹಾಗೂ ರಾಹುಲ್‌ ಗಾಂಧಿ ಅವರು ಬಾಬರ್‌ ಸಮಾಧಿಗೆ ಭೇಟಿ ನೀಡಿದ್ದರು ಎಂದು ಕುಟುಕಿದರು.

ಶ್ರೀರಾಮಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಸುದೀರ್ಘ ಹೋರಾಟದ ಇತಿಹಾಸ ಇದೆ. ಸೋಮನಾಥ ದೇವಾಲಯದ ಉದ್ಘಾಟನೆ ವೇಳೆಯೂ ಕಾಂಗ್ರೆಸ್ ಬಹಿಷ್ಕಾರ ಮಾಡಿತ್ತು. ಈಗ ಶ್ರೀರಾಮಮಂದಿರ ಉದ್ಘಾಟನೆ ವೇಳೆಯೂ ಇದೇ ನಿಲುವು ತಾಳಿದೆ. ಕಾಂಗ್ರೆಸ್‌ ನಾಯಕರು ಡೋಂಗಿ ಜಾತ್ಯತೀತ ರಾಜಕಾರಣ ಮಾಡುತ್ತಾ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ನಾಯಕಿ ಸೋನಿಯಾ ಗಾಂಧಿ ಅವರು ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ. ಇದು, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕ್ರಮ ಎಂದು ಆರೋಪಿಸುತ್ತಿದ್ದಾರೆ. ಇದು ದೇಶದ ಸರ್ವ ಹಿಂದೂಗಳ ಕಾರ್ಯಕ್ರಮ ಆಗಿದೆ. ಇದರಲ್ಲಿ ರಾಜಕೀಯ ಹುಡುಕಬಾರದು. ಇಡೀ ದೇಶವೇ ಹೆಮ್ಮೆ ಪಡುವ ಕಾರ್ಯಕ್ರಮ ಇದಾಗಿದೆ ಎಂದರು.

ಲೋಕಸಭೆ, ರಾಜ್ಯಸಭೆಗೆ ಸಂಸದರು ಗೈರಾಗುವುದನ್ನು ಕಂಡಿದ್ದೇವೆ. ಆದರೆ, ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ ಗೈರಾಗುತ್ತಿರುವುದು ಶೋಭೆ ತರುವ ವಿಷಯವಲ್ಲ. ದೇಶದಲ್ಲಿ ರಾಮಜಪವನ್ನು ವಿರೋಧ ಮಾಡುತ್ತಿರುವುದು ಸರಿಯಲ್ಲ. ಪಿ.ವಿ. ನರಸಿಂಹರಾವ್‌ ಅವರ ಅವಧಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು ಎಂಬುದು ಸುಳ್ಳು. ಆಗ ಕರಸೇವಕರ ಮೇಲೆ ದೇಶಾದ್ಯಂತ ಪ್ರಕರಣ ದಾಖಲಿಸಲಾಗಿತ್ತು. ಈಗ ರಾಜ್ಯದಲ್ಲೂ ಕರಸೇವಕರನ್ನು ಬಂಧನ ಮಾಡಲಾಗುತ್ತಿದೆ. ಇಂತಹ ದ್ವೇಷದ ರಾಜಕಾರಣ, ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ತಕ್ಕಪಾಠ ಕಲಿಸುತ್ತಾರೆ ಎಂದರು.

ಶ್ರೀರಾಮಮಂದಿರ ನಿರ್ಮಾಣವನ್ನೇ ಬಿಜೆಪಿ ಎಲೆಕ್ಷನ್ ಪ್ರಚಾರಾಂದೋಲನ ಮಾಡಿಕೊಳ್ಳುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಹೋರಾಟ ಇದೆ. ಋಷಿಮುನಿಗಳ ಪುಣ್ಯಭೂಮಿ ಭಾರತವಾಗಿದೆ. ದೇವಸ್ಥಾನದ ವಿಷಯದಲ್ಲಿ ರಾಜಕಾರಣ ಮಾಡಲಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲಿನಿಂದಲೂ ನಾಸ್ತಿಕರು. ಅವರು ದೇವರನ್ನು ನಂಬಲ್ಲ. ಅಲ್ಲಲ್ಲಿ, ಆಗಾಗ ಸಾರ್ವಜನಿಕವಾಗಿ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಮುಜರಾಯಿ ಇಲಾಖೆ ಜನವರಿ 22ರಂದು ರಾಜ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೊರಡಿಸಿರುವ ಆದೇಶ ತಮಗೆ ಗೊತ್ತಿಲ್ಲ ಎಂದಿರುತ್ತಾರೆ.

ಮುಜರಾಯಿ ಇಲಾಖೆ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತಮ ಆದೇಶವನ್ನೇ ಹೊರಡಿಸಿದ್ದಾರೆ. ರಾಜ್ಯದ ಹಿಂದೂಗಳ ಭಾವನೆಗೆ ಬೆಲೆ ನೀಡಿದ್ದಾರೆ ಎಂದರು.

ಮುಖಂಡರಾದ ಕಾಸಟ್ಟಿ ಉಮಾಪತಿ, ಸಾಲಿಸಿದ್ದಯ್ಯಸ್ವಾಮಿ, ದೇವರಮನಿ ಶ್ರೀನಿವಾಸ್‌, ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಹನುಮಂತಪ್ಪ ಬುಜ್ಜಿ ಮತ್ತಿತರರಿದ್ದರು.ರೆಡ್ಡಿ ಕುಟುಂಬದ ಬಗ್ಗೆ ಅಪಾರ ಗೌರವವಿದೆ: ಶ್ರೀರಾಮುಲು

ಶಾಸಕ ಜರ್ನಾದರ್ನ ರೆಡ್ಡಿ ಅವರು ನಮ್ಮನ್ನು ಬೆಳೆಸಿದವರು. ಜತೆಗೆ ಅನ್ನ ನೀಡಿದವರು. ಅವರ ಕುಟುಂಬದ ಬಗ್ಗೆ ನಮಗೆ ಅಪಾರ ಗೌರವ ಇದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ರೆಡ್ಡಿಯವರಿಗೆ ಜನ್ಮದಿನದ ಶುಭಾಶಯ ಕೋರುವೆ. ಜನಾರ್ದನ ರೆಡ್ಡಿಯವರಿಗೆ ಒಳ್ಳೆಯದಾಗಲಿ. ಅವರು ಬಿಜೆಪಿಗೆ ಮರಳಿದರೆ ನನ್ನ ಅಭ್ಯಂತರವೇನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!