ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಕಮಲಾಪೂರ ತಾಲೂಕಿನ ಬೆಣ್ಣೆತೋರಾ ನದಿಗೆ ಹೊಂದಿಕೊಂಡಿರುವ ಕುರಿಕೋಟಾ ಗ್ರಾಮದಲ್ಲಿ ಗುರುವಾರ ನೆರೆ ಹಾವಳಿ ರಾಜ್ಯ ಮಟ್ಟದ ಅಣುಕು ಪ್ರದರ್ಶನ ನಡೆಸಲಾಯ್ತು.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎನ್.ಡಿ.ಆರ್.ಎಫ್. ತಂಡ, ಪೊಲೀಸ್, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಆಯೋಜಿಸಿದ್ದ ನೆರೆ ಹಾವಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರೀ ಮಳೆ, ಪ್ರವಾಹ ಮುನ್ಸೂಚನೆ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ರಕ್ಷಿಸಿದ ಎನ್.ಡಿ.ಆರ್.ಎಫ್. ಪಡೆ, ಕಾಳಜಿ ಕೇಂದ್ರಕ್ಕೆ ನಿರಾಶ್ರಿತರ ಸುರಕ್ಷಿತ ರವಾನೆ, ಪರಿಹಾರ ಕೇಂದ್ರದಲ್ಲಿ ಊಟೋಪಚಾರದ ಜೊತೆಗೆ ವೈದ್ಯಕೀಯ ಆರೈಕೆ, ಸಾಂತ್ವನ ನುಡಿಗಳ ಜೊತೆಗೆ ಆತ್ಮಸ್ಥೈರ್ಯ ತುಂಬುವ ದೃಶ್ಯಾವಳಿಗಳು ಕಂಡು ಬಂದವು.
ಬೆಣ್ಣೆತೋರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಸಂಭಾವ್ಯ ನೆರೆ ಹಾವಳಿ ಹಿನ್ನೆಲೆಯಲ್ಲಿ ಇಂದಿಲ್ಲಿ ಅಣುಕು ಪ್ರದರ್ಶನ ಏರ್ಪಡಿಸಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪರಿಹಾರ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ಹೇಗೆಲ್ಲ ಮಾಡಬೇಕು ಎಂಬುದರ ಕುರಿತು ಅರಿವು ನೀಡುವುದರ ಜೊತೆಗೆ ಅಧಿಕಾರಿ ಸಿಬ್ಬಂದಿಗೆ ಪುನರ್‌ಮನನ ಕಾರ್ಯ ಇದಾಗಿತ್ತು.ನೆರೆ ಹಾವಳಿಗೆ ಸಿಲುಕಿದವರ ರಕ್ಷಿಸಲು ಬಂದ 25 ಜನರ ತಂಡವುಳ್ಳ ವಿಜಯವಾಡಾದ 10ನೇ ಬಟಾಲಿಯನ್ ಪಡೆ ಜನರನ್ನು ರಕ್ಷಿಸಿ ಸುರಕ್ಷಿತ ಕೇಂದ್ರಕ್ಕೆ ತರೆತರುವ ದೃಶ್ಯ ಸಾಮಾನ್ಯವಾಗಿತ್ತು. ರಕ್ಷಿತರನ್ನು ರಿಲೀಫ್ ಕ್ಯಾಂಪಿಗೆ ತಂದು ಅಲ್ಲಿ ವೈದ್ಯಕೀಯ ಚಿಕಿತ್ಸೆ, ಉಪಚಾರ ನೀಡಲಾಯಿತು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ಡಿ. ಅವಟಿ ನೇತೃತ್ವದ ಪಶು ವೈದ್ಯರ ತಂಡ ರೆಸ್ಕ್ಯೂ ಮಾಡಲಾದ ಜಾನುವಾರುಗಳಿಗೆ ತಾತ್ಕಲಿಕ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಕಾಳಜಿ ಕೇಂದ್ರದ ಸಂಪೂರ್ಣ ಉಸ್ತುವಾರಿಯನ್ನು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ವಹಿಸಿದ್ದರು.ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, ನೆರೆ ಹಾವಳಿ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಂದಿನ ಅಣುಕು ಪ್ರದರ್ಶನ ತುಂಬಾ ನೆರವಿಗೆ ಬರಲಿದೆ ಎಂದರು.
ಅಣಕು ಪ್ರದರ್ಶನದ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದ ವಿಜಯವಾಡಾದ ಎನ್.ಡಿ.ಆರ್.ಎಫ್. 10ನೇ ಬಟಾಲಿಯ್ ಕಮಾಂಡರ್ ರಾಬಿನ್, ಎಸ್ಪಿ ಅಡ್ಡೂರು ಶ್ರೀನಿವಾಸುಲು ಇದ್ದರು.ಅಣಕು ಪ್ರದರ್ಶನದಲ್ಲಿ ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಕಮಲಾಪೂರ ತಹಸೀಲ್ದಾರ್ ಮೊಸೀನ್ ಅಹ್ಮದ್, ಡಿ.ಐ.ಸಿ. ಜಂಟಿ ನಿರ್ದೇಶಕ ಸತೀಷಕುಮಾರ, ಡಿ.ಯು.ಡಿ.ಸಿ ಪಿ.ಡಿ ಮುನಾವರ್ ದೌಲಾ ಇದ್ದರು.