ಸೋಮರಡ್ಡಿ ಅಳವಂಡಿ
ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನುವ ಕಾರಣಕ್ಕಾಗಿ 8 ವರ್ಷಗಳಿಂದ ಪರ್ವತ ಮಲ್ಲಯ್ಯ ಸಮಾಜದ ಕುಟುಂಬವೊಂದನ್ನು ಅದೇ ಸಮಾಜ ಬಹಿಷ್ಕರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹನುಮಂತಪ್ಪ, ಮಂಜುಳಾ ಹುಳ್ಳಿ ದಂಪತಿ 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೀಗಾಗಿ ದಂಪತಿ ಹಾಗೂ ಇವರ ತಂದೆ-ತಾಯಿ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಕಳೆದ 8 ವರ್ಷದಿಂದ ಊರೂರು ಅಲೆದಿದ್ದ ಈ ಕುಟುಂಬ ಇದೀಗ ತಾಲೂಕಿನ ಚಿಲಕಮುಕ್ಕಿ ಗ್ರಾಮ ಹೊರವಲಯದಲ್ಲಿ ವಾಸಿಸುತ್ತಿದೆ.ಆಗಿದ್ದೇನು?:
ಶಿವಾಜಿ ಹಾಗೂ ಗಂಗಮ್ಮಳ ಮಗ ಹನುಮಂತಪ್ಪ ತಮ್ಮೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಹುಡುಗಿ ಮನೆಯವರು ಒಪ್ಪದೆ ಬೇರೊಬ್ಬನ ಜತೆ ಮದುವೆ ಮಾಡಿದ್ದರು. ಆದರೆ, ಆ ಹುಡುಗಿ ಹನುಮಂತಪ್ಪನೊಂದಿಗೆ ಮದುವೆಯಾಗಿ ಓಡಿಹೋಗಿದ್ದಳು. ಹೀಗಾಗಿ ಹುಳ್ಳಿ ಕುಟುಂಬಕ್ಕೆ ಪರ್ವತಮಲ್ಲಯ್ಯ ಸಮಾಜ 8 ವರ್ಷದ ಹಿಂದೆ ಬಹಿಷ್ಕಾರ ಹಾಕಿದೆ.ಕೆಲ ದಿನಗಳ ಹಿಂದೆ ರಾಜಿ ನಡೆದು ಅವರ ಮನೆಗೆ ಬೇಕಾದವರು ಹೋಗಬಹುದು ಎಂದು ತೀರ್ಮಾನಿಸಲಾಗಿದೆ. ಅದರಂತೆ ಹುಳ್ಳಿ ಕುಟುಂಬದಲ್ಲಿ ಮಾಡಿದ ದೇವರ ಕಾರ್ಯಕ್ಕೆ ನಾಲ್ಕಾರು ಕುಟುಂಬದವರು ಹೋಗಿ ಊಟ ಮಾಡಿ ಬಂದಿದ್ದರು. ಊಟ ಮಾಡಿದ ಎಲ್ಲರಿಗೂ ಬಹಿಷ್ಕಾರ ಹಾಕಲಾಗಿದ್ದು, ಗ್ರಾಪಂ ಮಾಜಿ ಸದಸ್ಯ ಶಂಕ್ರಪ್ಪ ಬೋಗಿ ಅವರಿಗೂ ಬಹಿಷ್ಕಾರದ ಬಿಸಿ ತಟ್ಟಿದೆ.
ಈ ಸ್ಥಿತಿಗೆ ಹನುಮಂತಪ್ಪನ ತಂದೆ ಶಿವಾಜಿ, ತಾಯಿ ಗಂಗಮ್ಮ ಕಣ್ಣೀರು ಹಾಕುತ್ತಿದ್ದು, ‘ನಾವು ದಂಡ ಕಟ್ಟಿ ನಮ್ಮ ಜನರ ಜತೆಗೆ ಸೇರಲು ಸಿದ್ಧರಿದ್ದೇವೆ. ಆದಕ್ಕೂ ಅವಕಾಶ ನೀಡದೆ ನಮ್ಮನ್ನು ದೂರವಿಟ್ಟಿದ್ದಾರೆ’ ಎಂದು ಅಳಲು ತೋಡಿಕೊಂಡಿದ್ದಾರೆ.