ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ತಂಡಗಳಿಗೆ ಪ್ರಶಸ್ತಿ

KannadaprabhaNewsNetwork |  
Published : Oct 23, 2024, 12:34 AM IST
25 | Kannada Prabha

ಸಾರಾಂಶ

ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಶ್ರೀ ರಾಮಕೃಷ್ಣ ವಿದ್ಯಾಶಾಲೆ ವತಿಯಿಂದ ನಗರದ ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ನಡೆದ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಡಬಲ್ಸ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡಗಳು ಪ್ರಶಸ್ತಿ ಗಳಿಸಿದೆ.ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ, ಶ್ರೀ ರಾಮಕೃಷ್ಣ ವಿದ್ಯಾಶಾಲೆ ವತಿಯಿಂದ ನಗರದ ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಿತು.ಬುಧವಾರ ನಡೆದ ಫೈನಲ್ ಪಂದ್ಯದ ಬಾಲಕರ ಡಬಲ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡದ ವಿರುದ್ಧ ಬೆಂಗಳೂರು ದಕ್ಷಿಣ ತಂಡದ ಆಟಗಾರರು ಪ್ರಬಲ ಹಣಾಹಣಿ ನಡೆಸಿದರು. ಡಬಲ್ಸ್ ನಲ್ಲಿ ದಕ್ಷಿಣ ಕನ್ನಡದ ಆರ್ಯ ಹಾಗೂ ತಿಲಕ್ ಜೋಡಿ ಬೆಂಗಳೂರು ದಕ್ಷಿಣದ ಸುಮಿತ್ ಹಾಗೂ ಕ್ರಿಸ್ ವಿರುದ್ಧ 18-21, 21-14, 21-13 ಅಂಕಗಳೊಂದಿಗೆ 2-1 ಸೆಟ್ ಗಳಿಂದ ಗೆಲುವು ಸಾಧಿಸಿದವು. ಆದರೆ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನದೊಂದಿಗೆ ಬಲಿಷ್ಠ ಕಮ್ ಬ್ಯಾಕ್ ಮಾಡಿದರು. ಸಿಂಗಲ್ಸ್ ನಲ್ಲಿ ಬೆಂಗಳೂರು ದಕ್ಷಿಣದ ಧ್ಯಾನ್ 21-05, 21-05(2-0) ಸೆಟ್ಗಳ ಮೂಲಕ ದಕ್ಷಿಣ ಕನ್ನಡದ ಅನ್ಶುಲ್ ಅವರನ್ನು ಮಣಿಸಿದರೆ. ರಿವರ್ಸ್ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ಕ್ರಿಸ್ 10-21, 21-11, 21-19(2- ಸೆಟ್ ನಿಂದ ದಕ್ಷಿಣ ಕನ್ನಡದ ಭಾವೇಶ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೂರು ಪಂದ್ಯಗಳಲ್ಲಿ 2-1ರ ಮುನ್ನಡೆಯೊಂದಿಗೆ ಬೆಂಗಳೂರು ದಕ್ಷಿಣ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದ ಆಟಗಾರರು ಮೈಸೂರು ತಂಡವನ್ನು 2-1ರಿಂದ ಸೋಲಿಸಿ ಪ್ರಶಸ್ತಿ ಗೆದ್ದುಬೀಗಿದರು. ಡಬಲ್ಸ್ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡದ ರುಜುಲಾ ಹಾಗೂ ಮೌನಿತ ಜೋಡಿ 21-13, 21-13 ಅಂಕಗಳಿಂದ 2-0 ಸೆಟ್ಗಳಿಂದ ಮೈಸೂರಿನ ದಿಯಾ ಮತ್ತು ಸಿಂಚನಾ ಅವರನ್ನು ಮಣಿಸಿದರು. ಸಿಂಗಲ್ಸ್ನಲ್ಲಿ ಮೈಸೂರಿನ ದಿಯಾ ಅವರು 21-08, 21-08 ಅಂಕಗಳೊಂದಿಗೆ 2-0 ಸೆಟ್ ಗಳಿಂದ ಗೆದ್ದರೆ. ಬಳಿಕ ನಡೆದ ರಿವರ್ಸ್ ಸಿಂಗಲ್ಸ್ ನಲ್ಲಿ ಬೆಂಗಳೂರು ಉತ್ತರ ತಂಡದ ರುಜುಜಾ ಅವರು ಮೈಸೂರಿನ ಅನನ್ಯ ಅವರನ್ನು 21-06, 21-06 ಅಂಕಗಳೊಂದಿಗೆ 2-0 ಸೆಟ್ನಿಂದ ಸೋಲಿಸುವ ಮೂಲಕ ತಮ್ಮ ತಂಡಕ್ಕೆ 2-1ರ ಮುನ್ನಡೆಯೊಂದಿಗೆ ಪ್ರಶಸ್ತಿ ತಂದುಕೊಟ್ಟರು. ಪ್ರಶಸ್ತಿ ವಿಜೇತರಿಗೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ಮರಿಸ್ವಾಮಿ, ರಾಮಕೃಷ್ಣ ವಿದ್ಯಾಶಾಲೆ ಪ್ರತಿನಿಧಿ ಸ್ವಾಮಿ ಯುಕ್ತೇಶಾನಂದಜಿ ಅವರು ಪ್ರಶಸ್ತಿ ವಿತರಿಸಿದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ವೆಂಕಟೇಶ್, ರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲ ಟಿ.ಕೆ. ಚಂದ್ರಶೇಖರ್, ಸುದರ್ಶನ್ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ