ಕನ್ನಡಪ್ರಭ ವಾರ್ತೆ ಕಾರ್ಕಳ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ರಾಜ್ಯ ಆರ್ಥಿಕತೆಯು ಅಧೋಗತಿಗೆ ಇಳಿದಿದೆ. ಇದನ್ನು ಸರಿಪಡಿಸಲು ಸಾಧ್ಯವಾಗದೇ ಇದೀಗ ಸರ್ಕಾರವು ಬಡವರ ಬಿಪಿಎಲ್ ಪಡಿತರ ಚೀಟಿ ರದ್ದತಿಗೆ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಬಡ ಜನತೆಯ ಪಡಿತರ ಚೀಟಿ ರದ್ಧತಿ ಮಾಡುವ ಮೂಲಕ ಆರನೇ ಭಾಗ್ಯ ನೀಡಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಟೀಕಿಸಿದರು.ಕಾರ್ಕಳದ ಬಜಗೋಳಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಪಡಿತರ ಚೀಟಿ ನೀಡದಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ಲಕ್ಷಾಂತರ ಜನ ಅನ್ನ ಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ತನ್ನ ಆರ್ಥಿಕ ನೀತಿಯ ವೈಫಲ್ಯವನ್ನು ಸರಿಪಡಿಸಲು ರಾಜ್ಯದ ಜನತೆಯ ಮೇಲೆ ಗಧಾ ಪ್ರಹಾರ ಮಾಡುತ್ತಿರುವ ಸರ್ಕಾರ, ಗ್ಯಾರಂಟಿಗಳನ್ನು ಕೊಡಲಾಗದೆ ಹೀಗೆ ತನ್ನ ಜನವಿರೋಧಿ ನೀತಿಸಂಕಲ್ಪವನ್ನು ಪರೋಕ್ಷವಾಗಿ ಈಡೇರಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಸರ್ಕಾರದ ಈ ಜನ ವಿರೋಧಿ ನೀತಿ, ಜನರಿಗೆ ಮಾಡಿರುವ ಮೋಸವನ್ನು ರಾಜ್ಯದ ಜನತೆಗೆ ತಿಳಿಸಬೇಕಾಗಿದೆ ಎಂದರು.ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಮುಡಾದಿಂದ ಅಕ್ರಮವಾಗಿ ಪಡೆದಿರುವ 14 ಸೈಟುಗಳನ್ನು ವಾಪಸ್ ನೀಡುವ ಮೂಲಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಭೆಯಲ್ಲಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉದಯ್ ಕೋಟ್ಯಾನ್, ಕಾರ್ಕಳ ಮಂಡಲದ ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಮರ್ಣೆ ಶಕ್ತಿಕೇಂದ್ರ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನಉಪಸ್ಥಿತರಿದ್ದರು.