ಗೋಪಾಲಸ್ವಾಮಿ ಬೆಟ್ಟದಲ್ಲಿ ನಾಳೆ ಬ್ರಹ್ಮ ರಥೋತ್ಸವ

KannadaprabhaNewsNetwork | Published : Apr 3, 2024 1:30 AM

ಸಾರಾಂಶ

ನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಬರುವ ಏ.೪ ರಂದು ಬ್ರಹ್ಮ ರಥೋತ್ಸವಕ್ಕೆ ತಾಲೂಕು ಆಡಳಿತ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಬರುವ ಏ.೪ ರಂದು ಬ್ರಹ್ಮ ರಥೋತ್ಸವಕ್ಕೆ ತಾಲೂಕು ಆಡಳಿತ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ತಾಲೂಕಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಜರುಗಲಿರುವ ಜಾತ್ರೆಯ ಅಂಗವಾಗಿ ಉದ್ಯಾನವನದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್‌ ಹೇಳಿದರು.

ತಪ್ಪಲಲ್ಲಿ ವ್ಯಾಪಾರ: ಜಾತ್ರೆಗೆ ಭಕ್ತರು ಹೂವು-ಹಣ್ಣು, ತೆಂಗಿನಕಾಯಿ, ಇನ್ನಿತರ ವಸ್ತುಗಳನ್ನು ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಬಳಿಯಿರುವ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ವಾಹನಕ್ಕೆ ಅವಕಾಶವಿಲ್ಲ: ಗೋಪಾಲಸ್ವಾಮಿ ಜಾತ್ರೆಗೆ ಬರುವ ಭಕ್ತರು ಖಾಸಗಿ ವಾಹನಗಳನ್ನು ಬೆಟ್ಟಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಬೆಟ್ಟದ ತಪ್ಪಲಿನ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ನಲ್ಲಿ ಸಾರಿಗೆ ಬಸ್‌ನಿಂದ ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗು ಮಿನಿ ವಾಹನಗಳಿಗೆ ಬೆಟ್ಟದ ತಪ್ಪಲಿನ ಬಳಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ ತೆರಳುವವರು ಸಾರಿಗೆ ಬಸ್‌ನಲ್ಲೇ ಬೆಟ್ಟಕ್ಕೆ ತೆರಳ ಬಹುದಾಗಿದೆ.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಹಾಗೂ ಭಕ್ತರು ಬರುವ ಸಾಧ್ಯತೆ ಇರುವ ಕಾರಣ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಹಾಗೂ ಎಸ್‌ಟಿಪಿಎಫ್‌ ಸಿಬ್ಬಂದಿ ಹಾಗೂ ಫೈರ್‌ ವಾಚರ್‌ಗಳನ್ನು ನೇಮಿಸಲಾಗುವುದು ಎಂದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ತಿಳಿಸಿದರು.

ಬಸ್‌ ಓಡಾಟ: ಗೋಪಾಲಸ್ವಾಮಿ ಬೆಟ್ಟಕ್ಕೆ ಗುಂಡ್ಲುಪೇಟೆ ಬಸ್‌ ನಿಲ್ದಾಣದಿಂದ ೧೦ ಬಸ್‌ ಹಾಗೂ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ೨೫ ಬಸ್‌ಗಳನ್ನು ಗೋಪಾಲಸ್ವಾಮಿ ಬೆಟ್ಟಕ್ಕೆ ಬಿಡಲಾಗುವುದು ಎಂದು ಗುಂಡ್ಲುಪೇಟೆ ಘಟಕ ವ್ಯವಸ್ಥಾಪಕಿ ಪುಷ್ಪ ತಿಳಿಸಿದರು.

ಜಾತ್ರೆಯಲ್ಲಿ ಒತ್ತರದ ಅಂಬಿನಿಂದ ತೇರು ಎಳೆಯಲಾಗುತ್ತೆ!

ಜಾತ್ರೆಗಳಲ್ಲಿ ತೇರು (ರಥ) ವನ್ನು ಹಗ್ಗದಿಂದ ಎಳೆಯುವುದು ನೋಡಿದ್ದೆವು. ಆದರೆ ಗೋಪಾಲಸ್ವಾಮಿ ಜಾತ್ರೆಯಲ್ಲಿ ಒತ್ತರದ ಅಂಬು, ನಾರುಗಳನ್ನು ಹಗ್ಗದಂತೆ ಹೆಣೆದು ತೇರು ಎಳೆಯುವುದು ಈ ಜಾತ್ರೆಯ ವಿಶೇಷ. ಗೋಪಾಲಸ್ವಾಮಿ ಜಾತ್ರೆಯ ದಿನ ಗೋಪಾಲಸ್ವಾಮಿ ದರ್ಶನ ಪಡೆದರೆ ದೋಷಗಳು ಪರಿಹಾರವಾಗಲಿದೆ ಎಂಬುದು ಹಿಂದಿನಿಂದಲೂ ಪ್ರತೀತಿಯಿದೆ. ತಾಲೂಕಿನ ಗೋಪಾಲಪುರ ಗ್ರಾಮಸ್ಥರು ಕಾಡಿನಲ್ಲಿ ಸಿಗುವ ಒತ್ತರದ ಅಂಬುಗಳನ್ನು ತಂದು ಹಗ್ಗದ ರೀತಿಯಲ್ಲಿ ತಯಾರು ಮಾಡಲಿದ್ದು, ಹೊನ್ನೇಗೌಡನ ಹಳ್ಳಿ ಗ್ರಾಮಸ್ಥರ ತೇರಿಗೆ ಬೇಕಾದ ಬೊಂಬು ತಂದು ಕೊಡಲಿದ್ದಾರೆ. ಜಾತ್ರೆಯ ದಿನ ಗೋಪಾಲ ಕೃಷ್ಣನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ.

Share this article