ಕುಡಿವ ನೀರಿನ ಪೂರೈಕೆಗೆ ಪ್ರಥಮಾದ್ಯತೆ ನೀಡಿ: ಡಿಸಿ ಸೂಚನೆ

KannadaprabhaNewsNetwork | Published : Apr 3, 2024 1:30 AM

ಸಾರಾಂಶ

ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆಯಿರಿ. ಇಲ್ಲವಾದರೆ ಟ್ಯಾಂಕರ್‌ ಮಾಲೀಕರಿಂದ ಕೋಟೆಶನ್‌ ಪಡೆದು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರಥಮ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತಾದ ಸಭೆಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕುಡಿಯುವ ನೀರಿನ ಯಾವುದೇ ಸಮಸ್ಯೆಗಳು ಕಂಡು ಬಂದರೆ ತಹಸೀಲ್ದಾರ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಸಂಬಂಧಪಟ್ಟ ಗ್ರಾಮಗಳಲ್ಲಿ ಖಾಸಗಿ ಬೋರವೆಲ್‌ಗಳನ್ನು ಬಾಡಿಗೆ ಪಡೆಯಬೇಕು. ಖಾಸಗಿಯಾಗಿ ಲಭ್ಯವಿಲ್ಲವಾದರೆ ಕೂಡಲೇ ಟ್ಯಾಂಕರ್‌ ಮಾಲೀಕರಿಂದ ಕೋಟೆಶನ್‌ ಪಡೆದು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಕೆಲವೊಂದು ತಾಲೂಕುಗಳಲ್ಲಿ ಟ್ಯಾಂಕರ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡುತ್ತಿದ್ದು, ಟ್ಯಾಂಕರ್‌ ಮಾಲೀಕರಿಗೆ 15 ದಿನಕೊಮ್ಮೆ ಬಾಡಿಗೆ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು. ಖಾಸಗಿ ಬೋರ್‌ವೆಲ್‌ ಮಾಲೀಕರಿಗೂ ಸಹ ಬಾಡಿಗೆ ಪಾವತಿಸುವ ಕ್ರಮಕೈಗೊಳ್ಳಬೇಕೆಂದು ಸಂಬಂಧಪಟ್ಟ ತಹಸೀಲ್ದಾರ್‌ಗಳಿಗೆ ಸೂಚಿಸಿದರು.

ಬಸವಕಲ್ಯಾಣ, ಭಾಲ್ಕಿ, ಕಮಲನಗರ ತಾಲೂಕುಗಳಲ್ಲಿ ಹಲವೆಡೆ ಮೋಟರ್‌ ಮತ್ತು ಪೈಪ್‌ಲೈನ್‌ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಆದರ ಬಿಲ್‌ ಪಾವತಿಗೆ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಪಂ ಸಿಇಒ ಡಾ. ಗಿರೀಶ್‌ ಬದೋಲೆ ಮಾತನಾಡಿ, ಈಗಾಗಲೇ ಕುಡಿಯುವ ನೀರಿನ ಸಮಸ್ಯೆಗಳು ಆಗದಂತೆ ಮುಂಜಾಗ್ರತೆ ಕ್ರಮ ವಹಿಸಿಕೊಳ್ಳಲಾಗಿದೆ. ಕೆಲ ಗ್ರಾಮಗಳಲ್ಲಿ ಬೋರ್‌ವೆಲ್‌ ಕೊರೆಯಿಸಿ ಪೈಪ್‌ಲೈನ್‌ ಅಳವಡಿಸಲು ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರ್‌, ತಾಪಂ ಇಒಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article